ಹುಬ್ಬಳ್ಳಿ: 6 ಲಕ್ಷ ಲಂಚ ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆ ಡಿಸಿ ಲೋಕಾಯುಕ್ತ ಬಲೆಗೆ!

ಹುಬ್ಬಳ್ಳಿ: ಜಿಎಸ್ಟಿ (GST) ಪಾವತಿಯಲ್ಲಿ ರಿಯಾಯಿತಿ ಕೊಡಿಸಲು ಹಾಗೂ ನೋಟಿಸ್ ಕೈಬಿಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ (DC) ಭರತ್ ಹೆಗ್ಗಡೆ ಅವರು ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಈ ಭರ್ಜರಿ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಆರೋಪಿಯು ಆರು ಲಕ್ಷ ರೂಪಾಯಿ ಲಂಚದ ಹಣದೊಂದಿಗೆ ಸಿಕ್ಕಿಬಿದ್ದಿದ್ದಾರೆ.
ವಿಶ್ವನಾಥ್ ನಾಯಕ್ ಎಂಬುವವರು ಲಾರಿ ಮತ್ತು ಪೆಟ್ರೋಲ್ ಬಂಕ್ ಮಾಲೀಕರಾಗಿದ್ದು, ಇವರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಸುಮಾರು 60 ಲಕ್ಷ ರೂಪಾಯಿ ಜಿಎಸ್ಟಿ ಹಣ ಕಟ್ಟುವಂತೆ ಉಪ ಆಯುಕ್ತ ಭರತ್ ಹೆಗ್ಗಡೆ ನೋಟಿಸ್ ನೀಡಿದ್ದರು. ಈ ತೆರಿಗೆ ಹಣವನ್ನು ಕಡಿಮೆ ಮಾಡಿಕೊಡಬೇಕು ಅಥವಾ ಹಣ ಕಟ್ಟದಂತೆ ಅನುಕೂಲ ಮಾಡಿಕೊಡಬೇಕೆಂದು ವಿಶ್ವನಾಥ್ ಅವರು ಅಧಿಕಾರಿ ಬಳಿ ಮನವಿ ಮಾಡಿದ್ದರು.
ಕೆಲಸ ಮಾಡಿಕೊಡಲು ಅಧಿಕಾರಿ ಭರತ್ ಹೆಗ್ಗಡೆ ಅವರು 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಆದರೆ, ಅಂತಿಮವಾಗಿ 6 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ವಿಶ್ವನಾಥ್ ನಾಯಕ್ ಅವರು ಬೆಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳ ತಂಡವು ಹುಬ್ಬಳ್ಳಿಯ ನವನಗರದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯ ಮೇಲೆ ದಾಳಿ ಮಾಡಿತು. ದೂರುದಾರರಿಂದ 6 ಲಕ್ಷ ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದಾಗಲೇ ಭರತ್ ಹೆಗ್ಗಡೆ ಅವರನ್ನು ಹಣದ ಸಮೇತ ವಶಕ್ಕೆ ಪಡೆಯಲಾಗಿದೆ.
ಪ್ರಸ್ತುತ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದು, ಕಚೇರಿಯ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಕಾರ್ಯಾಚರಣೆಯು ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ದೊಡ್ಡ ಮಟ್ಟದ ಎಚ್ಚರಿಕೆ ನೀಡಿದಂತಾಗಿದೆ.



