Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಪಾನಮತ್ತ ಯುವಕನ ಉದ್ಧಟತನ: ಮೆಲ್ಕಾರ್ ಪೆಟ್ರೋಲ್ ಪಂಪ್‌ನಲ್ಲಿ ಹಲ್ಲೆ, ಉಪಕರಣ ಧ್ವಂಸ!

Share News

ಬಂಟ್ವಾಳ: ಕುಡಿದ ಅಮಲಿನಲ್ಲಿ ಪೆಟ್ರೋಲ್ ಪಂಪ್‌ಗೆ ನುಗ್ಗಿದ ಯುವಕನೊಬ್ಬ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಪಂಪ್‌ನ ಉಪಕರಣಗಳನ್ನು ಧ್ವಂಸಗೊಳಿಸಿ ಸಾರ್ವಜನಿಕವಾಗಿ ರಂಪಾಟ ನಡೆಸಿದ ಘಟನೆ ಮೆಲ್ಕಾರ್‌ನ ಗುಡ್ಡೆಯಂಗಡಿಯಲ್ಲಿ ವರದಿಯಾಗಿದೆ. ಪೊಲೀಸರ ಎದುರಲ್ಲೇ ಆವಾಜ್ ಹಾಕುತ್ತಾ ಹೈಡ್ರಾಮಾ ಸೃಷ್ಟಿಸಿದ ಈತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಜಪಮೂಡ ಕಾರಾಜೆಯ ಅಫ್ರೀದ್ (28) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಈತ, ಶನಿವಾರ ಸಂಜೆ ಪಾನಮತ್ತನಾಗಿ ಮೆಲ್ಕಾರ್‌ನ ಪೆಟ್ರೋಲ್ ಪಂಪ್‌ಗೆ ನಡೆದುಕೊಂಡು ಬಂದಿದ್ದಾನೆ. ಈ ವೇಳೆ ಗ್ಯಾಸ್ ಭರ್ತಿ ಮಾಡುತ್ತಿದ್ದ ಸಿಬ್ಬಂದಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದಕ್ಕಿಳಿದ ಅಫ್ರೀದ್, ಏಕಾಏಕಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ, ಪಂಪ್‌ನಲ್ಲಿದ್ದ ಗ್ಯಾಸ್ ಪೈಪ್‌ಗಳನ್ನು ಎಳೆದಾಡಿ, ಕಾಲಿನಿಂದ ತುಳಿದು ಅಲ್ಲಿದ್ದ ಬೆಲೆಬಾಳುವ ಉಪಕರಣಗಳಿಗೆ ಹಾನಿ ಮಾಡಿದ್ದಾನೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಬೀಟ್ ಪೊಲೀಸ್ ಸಿಬ್ಬಂದಿಯೊಬ್ಬರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದಾರೆ.

ಪೊಲೀಸರ ಸಮ್ಮುಖದಲ್ಲೂ ತನ್ನ ಉದ್ಧಟತನ ಮುಂದುವರಿಸಿದ ಆರೋಪಿ, ಸಾರ್ವಜನಿಕರ ಎದುರಲ್ಲೇ ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಆವಾಜ್ ಹಾಕಿದ್ದಾನೆ. ರಂಪಾಟ ಮಿತಿಮೀರುತ್ತಿದ್ದಂತೆ ಠಾಣೆಯಿಂದ ಬಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಆರೋಪಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಜೀಪಿಗೆ ಹಾಕಿ ಠಾಣೆಗೆ ಕರೆದೊಯ್ದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೆಟ್ರೋಲ್ ಪಂಪ್ ಮ್ಯಾನೇಜರ್ ಕುನಾಲ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!