ಬೀದರ್ ಇತಿಹಾಸದಲ್ಲೇ ಮೊದಲು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಪೊಲೀಸರಿಂದ ಆಕರ್ಷಕ ಪಥಸಂಚಲನ!

ಬೀದರ್: ಜಿಲ್ಲೆಯ ಪೊಲೀಸ್ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ (ಶುಕ್ರವಾರ) ಬೆಳಿಗ್ಗೆ ಬೀದರ್ ನಗರದ ಮಂಗಳಪೇಟೆಯಲ್ಲಿರುವ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ವಿಶೇಷ ಕವಾಯತು ನಡೆಸಲಾಯಿತು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಹಾಗೂ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯ ಒಟ್ಟು 7 ತಂಡಗಳು ಈ ವಿಶೇಷ ಪರೇಡ್ನಲ್ಲಿ ಭಾಗವಹಿಸಿದ್ದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಾನ್ಯ ಶ್ರೀ ಪ್ರದೀಪ್ ಗುಂಟಿ (IPS) ಅವರು ಕವಾಯತಿನ ಗೌರವ ವಂದನೆಯನ್ನು ಸ್ವೀಕರಿಸಿದರು.
ಸಾಮಾನ್ಯವಾಗಿ ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜಂಟಿ ಪರೇಡ್ ನಡೆಯುವುದು ವಾಡಿಕೆ. ಆದರೆ, ಕೇವಲ ಮಹಿಳಾ ಪೊಲೀಸ್ ಅಧಿಕಾರಿಗಳೇ ಸೇರಿ ಇಂತಹದೊಂದು ಬೃಹತ್ ಮತ್ತು ವಿಶೇಷ ಕವಾಯತು ನಡೆಸಿರುವುದು ಬೀದರ್ ಜಿಲ್ಲೆಯ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ. ಮಹಿಳಾ ಶಕ್ತಿಯನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಗಳ ಶಿಸ್ತು ಮತ್ತು ಬದ್ಧತೆಯನ್ನು ಪ್ರದರ್ಶಿಸಲು ಈ ಪರೇಡ್ ಸಾಕ್ಷಿಯಾಯಿತು. ಇದು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಕೆಲಸವಾಗಿದೆ,” ಎಂದು ಕಾರ್ಯಕ್ರಮದ ಆಶಯವನ್ನು ತಿಳಿಸಲಾಗಿದೆ.
ಮಹಿಳಾ ಪೊಲೀಸರ ಸಮವಸ್ತ್ರಧಾರಿ ಶಿಸ್ತುಬದ್ಧ ಪಥಸಂಚಲನ ನೋಡುಗರ ಗಮನ ಸೆಳೆಯಿತು ಮತ್ತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.



