Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿ

ಹಣ ದ್ವಿಗುಣಗೊಳಿಸುವ ಆಮಿಷ: ಇಬ್ಬರು ಪೊಲೀಸರು ಸೇರಿ ಏಳು ಮಂದಿ ಅಂತರರಾಜ್ಯ ವಂಚಕರ ಬಂಧನ!

Share News

ಗೋಕಾಕ: ಸಾರ್ವಜನಿಕರಿಗೆ ಹಣವನ್ನು ನಾಲ್ಕು ಪಟ್ಟು ಮಾಡಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸುವಲ್ಲಿ ಗೋಕಾಕ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಜಾಲದಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ. ರಾಮರಾಜನ್ ತಿಳಿಸಿದ್ದಾರೆ.

ಬಂಧಿತ ವಂಚಕರು ಸಾರ್ವಜನಿಕರನ್ನು ನಂಬಿಸಲು ವಿಲಕ್ಷಣ ತಂತ್ರವೊಂದನ್ನು ಬಳಸುತ್ತಿದ್ದರು. ಬಿಳಿ ಹಾಳೆಗಳಿಗೆ ಕಪ್ಪು ಬಣ್ಣ ಬಳಿದು, ಅದನ್ನು ವಿಶೇಷ ರಾಸಾಯನಿಕ ಬಳಸಿ ಅಸಲಿ ನೋಟುಗಳನ್ನಾಗಿ ಪರಿವರ್ತಿಸುವುದಾಗಿ ನಂಬಿಸುತ್ತಿದ್ದರು. ಈ ಮೂಲಕ ಹಣವನ್ನು ನಾಲ್ಕು ಪಟ್ಟು ಮಾಡಿಕೊಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೋಚುತ್ತಿದ್ದರು.

ಗೋಕಾಕದ ಶ್ರೀನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಈ ಕೆಳಗಿನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ:

ಪರಶುರಾಮ ಭೀಮಶಿ ಬಡಕರಿ

ಇಮ್ರಾನ ಬಾಬಾಜಾನ ಜುನೇದಿ

ಜಯಶ್ರೀ ಬಾಬು ಕಾಂಬಳೆ

ಮನೀಷಾ ರಾಜು ಗಾಯಕವಾಡ (ಮಾರ್ಗೇರೆಟ್ ಡೆವಿಡ್ ಗಾಯಕವಾಡ)

ಉಜ್ವಲಾ ತುಳಸಿರಾಮ ಬಿಲಾನೆ

ಅನಂತ ಪ್ರಕಾಶ ನರವಾಡೆ (ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿ)

ದಿಲದಾರ ರಬ್ಬಾನಿ ಶೇಖ (ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿ)

ಗೋಕಾಕ ಶಹರ ಠಾಣೆಯ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಈ ಅಂತರರಾಜ್ಯ ದಂಧೆಯ ಮೇಲೆ ದಾಳಿ ನಡೆಸಿದ್ದಾರೆ. ಕಾನೂನು ರಕ್ಷಕರೇ ಭಕ್ಷಕರಾಗಿ ವಂಚನೆ ಜಾಲದಲ್ಲಿ ಭಾಗಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

“ವಂಚಕರು ಸಾರ್ವಜನಿಕರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ,” ಎಂದು ಎಸ್‌ಪಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರು ಇಂತಹ ಅಡ್ಡದಾರಿಗಳಲ್ಲಿ ಹಣ ದ್ವಿಗುಣಗೊಳಿಸುವ ಆಮಿಷಗಳಿಗೆ ಬಲಿಯಾಗಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!