ಬೀದರ್‌ನಲ್ಲಿ ದಾರುಣ ಘಟನೆ: ಸಹಪಾಠಿಯ ಪ್ರೇಮದ ಹೆಸರಿನ ಕಿರುಕುಳಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಬಲಿ!

ಬೀದರ್: ಪ್ರೀತಿಸುವಂತೆ ಪೀಡಿಸುತ್ತಿದ್ದ ಸಹಪಾಠಿಯ ಮಾನಸಿಕ ಕಿರುಕುಳ ತಾಳಲಾರದೆ, 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಮದಿಯಾ ನಶೀರ್ ಪಾಷಾ (16) ಎಂದು ಗುರುತಿಸಲಾಗಿದೆ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಈಕೆ, ತನ್ನದೇ ತರಗತಿಯ ಸಹಪಾಠಿಯೊಬ್ಬ ನೀಡುತ್ತಿದ್ದ ಸತತ ಕಿರುಕುಳದಿಂದ ನೊಂದಿದ್ದಳು ಎನ್ನಲಾಗಿದೆ. ಬಾಲಕಿಯು ಆತನ ಪೀಡನೆಗೆ ಸೊಪ್ಪು ಹಾಕದಿದ್ದಾಗ, ಆತ ಶಾಲಾ ಆವರಣದಲ್ಲಿಯೇ ಆಕೆಯನ್ನು ಚುಡಾಯಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಶಾಲೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆರೋಪಿ ವಿದ್ಯಾರ್ಥಿಯು ಬಾಲಕಿಗೆ ಕಿರುಕುಳ ನೀಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ದೃಶ್ಯಗಳೇ ಪ್ರಕರಣದ ಪ್ರಮುಖ ಸಾಕ್ಷ್ಯಗಳಾಗಿವೆ. ತನ್ನ ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದ ಬಾಲಕಿ, ಈ ಕಿರುಕುಳದಿಂದ ಮುಕ್ತಿ ಕಾಣಲು ಶಾಲಾ ಕಟ್ಟಡದ ಮೇಲಿಂದ ಹಾರಿ ಪ್ರಾಣ ಬಿಟ್ಟಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
”ನಮ್ಮ ಮಗಳ ಕನಸುಗಳು ನುಚ್ಚುನೂರಾಗಿವೆ. ಇಂತಹ ಕಿರುಕುಳ ನೀಡುವವರಿಗೆ ಕಠಿಣ ಶಿಕ್ಷೆಯಾಗಲಿ, ಇನ್ಯಾವ ಹೆತ್ತವರಿಗೂ ಈ ಪರಿಸ್ಥಿತಿ ಬಾರದಿರಲಿ,” ಎಂದು ಮೃತಳ ಪೋಷಕರು ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಲಾಗಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ವಿದ್ಯಾ ದೇಗುಲಗಳಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿರುವುದು ಪೋಷಕರಲ್ಲಿ ಭೀತಿ ಹುಟ್ಟಿಸಿದೆ. ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು ಮತ್ತು ಇಂತಹ ಕಿರುಕುಳದ ದೂರುಗಳು ಬಂದಾಗ ತಕ್ಷಣ ಸ್ಪಂದಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.



