ಮಧುಮೇಹಿಗಳಿಗೆ ವರವಾಗಲಿದೆ ‘ಐಸಿಆರ್‌ಎಎಸ್’ ತಂತ್ರಜ್ಞಾನ: ಹೃದಯ, ಮೂತ್ರಪಿಂಡದ ಅಪಾಯ ಪತ್ತೆಗೆ ಈಗ ಸುಲಭ ದಾರಿ!

ಬೆಂಗಳೂರು: ಭಾರತವು ವಿಶ್ವದ ಮಧುಮೇಹದ ರಾಜಧಾನಿ ಎನ್ನಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಟೈಪ್ 2 ಮಧುಮೇಹ ಹೊಂದಿರುವವರ ಆರೋಗ್ಯ ರಕ್ಷಣೆಗೆ ಹೊಸ ಆಶಾಕಿರಣ ಮೂಡಿದೆ. ಜಾಗತಿಕ ಆರೋಗ್ಯ ಸೇವಾ ಸಂಸ್ಥೆಯಾದ ಅಬಾಟ್ (Abbott), ಮಧುಮೇಹಿಗಳಲ್ಲಿ ಕಂಡುಬರುವ ಹೃದಯ ಮತ್ತು ಮೂತ್ರಪಿಂಡದ ಅಪಾಯಗಳನ್ನು ಮುನ್ಸೂಚನೆ ನೀಡುವ ‘ಐಸಿಆರ್‌ಎಎಸ್’ (ICRAS) ಎಂಬ ವಿನೂತನ ವೆಬ್ ಆಧಾರಿತ ಉಪಕರಣವನ್ನು ಬಿಡುಗಡೆ ಮಾಡಿದೆ.
ಇದರ ಪೂರ್ಣ ಹೆಸರು ‘ಇಂಟರ್ ನ್ಯಾಷನಲ್ ಕಾರ್ಡಿಯೋ- ರೀನಲ್ ರಿಸ್ಕ್ ಅಸೆಸ್ ಮೆಂಟ್ ಅಂಡ್ ಸ್ಟ್ರಾಟಿಫಿಕೇಶನ್’. ಇದು ವೈದ್ಯರಿಗೆ ತಮ್ಮ ರೋಗಿಗಳ ಆರೋಗ್ಯ ಸ್ಥಿತಿಯನ್ನು ಡಿಜಿಟಲ್ ಆಗಿ ಮೌಲ್ಯಮಾಪನ ಮಾಡಲು ಸಹಾಯ ಮಾಡುವ ಒಂದು ಸ್ಮಾರ್ಟ್ ಟೂಲ್. ದೇಶದ ಖ್ಯಾತ ತಜ್ಞ ವೈದ್ಯರ ಸಮಿತಿಯ ಮಾರ್ಗದರ್ಶನದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಈ ವೆಬ್ ಆಧಾರಿತ ಉಪಕರಣವು ರೋಗಿಯ ವೈದ್ಯಕೀಯ ಪರೀಕ್ಷಾ ವರದಿಗಳು, ಜೀವನಶೈಲಿ ಮತ್ತು ಲಿಂಗ ಆಧಾರಿತ ವ್ಯತ್ಯಾಸಗಳನ್ನು ವಿಶ್ಲೇಷಿಸುತ್ತದೆ.
ಮಧುಮೇಹದಿಂದಾಗಿ ಭವಿಷ್ಯದಲ್ಲಿ ಮೂತ್ರಪಿಂಡ ಕಾಯಿಲೆ (DKD) ಅಥವಾ ಹೃದಯಾಘಾತದಂತಹ (MACE) ಸಮಸ್ಯೆಗಳು ಉಂಟಾಗುವ ಸಾಧ್ಯತೆ ಎಷ್ಟಿದೆ ಎಂಬುದಕ್ಕೆ ಇದು ‘ರಿಸ್ಕ್ ಸ್ಕೋರ್’ (Risk Score) ನೀಡುತ್ತದೆ.
ಇದರಿಂದ ವೈದ್ಯರು ರೋಗದ ತೀವ್ರತೆ ಹೆಚ್ಚಾಗುವ ಮೊದಲೇ ಎಚ್ಚೆತ್ತುಕೊಂಡು ಚಿಕಿತ್ಸೆ ಆರಂಭಿಸಲು ಸಾಧ್ಯವಾಗುತ್ತದೆ.
ಬೆಂಗಳೂರಿನ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಎಂಡೋಕ್ರೈನಾಲಜಿಸ್ಟ್ ಡಾ. ಪ್ರಮೀಳಾ ಕಾಲ್ರಾ ಅವರು ಮಾತನಾಡಿ, “ಮಧುಮೇಹದ ಸಂಕೀರ್ಣತೆಗಳು ದೇಹದ ಒಳಗೆ ನಿಶ್ಯಬ್ದವಾಗಿ ಬೆಳೆಯುತ್ತವೆ. ಟೈಪ್ 2 ಮಧುಮೇಹವಿರುವ ಸುಮಾರು 40% ರೋಗಿಗಳಲ್ಲಿ ಮೂತ್ರಪಿಂಡದ ಸಮಸ್ಯೆ ಹಾಗೂ ಮೂರನೇ ಒಂದು ಭಾಗದಷ್ಟು ಜನರಲ್ಲಿ ಹೃದಯದ ಕಾಯಿಲೆಗಳು ಕಂಡುಬರುತ್ತವೆ. ಈ ಐಸಿಆರ್‌ಎಎಸ್ ಉಪಕರಣವು ಇಂತಹ ಅಪಾಯಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ರೋಗಿಗಳು ದೀರ್ಘಕಾಲ ಆರೋಗ್ಯವಾಗಿರಲು ನೆರವಾಗುತ್ತದೆ,” ಎಂದರು.
ಈ ಉಪಕರಣದ ವಿಶೇಷವೆಂದರೆ ಇದು ರೋಗಿಗಳ ಅಥವಾ ವೈದ್ಯರ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಹೀಗಾಗಿ ಗೌಪ್ಯತೆಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಅಬಾಟ್ ಇಂಡಿಯಾದ ವೈದ್ಯಕೀಯ ನಿರ್ದೇಶಕ ಡಾ. ಕಾರ್ತಿಕ್ ಪೀತಾಂಬರನ್ ತಿಳಿಸಿದ್ದಾರೆ.
ಈ ಉಪಕರಣದ ಪ್ರಮುಖ ಪ್ರಯೋಜನಗಳು:
ಆರಂಭಿಕ ಪತ್ತೆ: ರೋಗ ಲಕ್ಷಣಗಳು ತೀವ್ರವಾಗುವ ಮೊದಲೇ ಸಂಭವನೀಯ ಅಪಾಯಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ.
ವೈಯಕ್ತೀಕರಿಸಿದ ಚಿಕಿತ್ಸೆ: ಪ್ರತಿಯೊಬ್ಬ ರೋಗಿಯ ಸ್ಥಿತಿಗೆ ಅನುಗುಣವಾಗಿ ಸ್ಪಷ್ಟ ಸಾರಾಂಶ ನೀಡುವುದರಿಂದ ನಿಖರ ಚಿಕಿತ್ಸೆ ಸಾಧ್ಯ.
ಸಂಕೀರ್ಣತೆಗಳ ಇಳಿಕೆ: ಸಮಯೋಚಿತ ನಿರ್ಧಾರಗಳಿಂದ ಹೃದಯ ಮತ್ತು ಮೂತ್ರಪಿಂಡ ವೈಫಲ್ಯದ ಸಾಧ್ಯತೆಯನ್ನು ತಡೆಯಬಹುದು.



