ಮನೆಯ ಬಾಗಿಲು ಮುರಿದು ಬಂಗಾರ ಕಳವು ಮಾಡಿದ್ದ ಕುಖ್ಯಾತ ಅಂತರರಾಜ್ಯ ಕಳ್ಳರ ಬಂಧನ: ₹16.90 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡಿದ್ದ ಕುಖ್ಯಾತ ಅಂತರರಾಜ್ಯ ಕಳ್ಳರ ತಂಡವನ್ನು ಬಂಧಿಸುವಲ್ಲಿ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ವಿವಿಧ ಮಾದರಿಯ ಒಟ್ಟು 130 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಅಂದಾಜು ಮೌಲ್ಯ 16,90,000 ರೂ. ಎಂದು ತಿಳಿದುಬಂದಿದೆ.
ಬಾಗೇಪಲ್ಲಿ ಟೌನ್ನ ಪಿ.ಎಲ್.ಡಿ ಬ್ಯಾಂಕ್ ರಸ್ತೆ ನಿವಾಸಿ ಎ.ಶಂಕರ್ ನಾರಾಯಣ ಎಂಬುವವರ ಮನೆಯ 3ನೇ ಮಹಡಿಯ ಅಲ್ಯುಮಿನಿಯಂ ಬಾಗಿಲನ್ನು ಮುರಿದು ಒಳನುಗ್ಗಿದ್ದ ಕಳ್ಳರು, ಕಬೋರ್ಡ್ನಲ್ಲಿದ್ದ 28 ಗ್ರಾಂ ಬಂಗಾರದ ಒಡವೆಗಳನ್ನು ಕಳವು ಮಾಡಿದ್ದರು. ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ (ಮೊ.ಸಂ: 08-2025, ಕಲಂ: 305(ಎ), 331(4) ಬಿ.ಎನ್.ಎಸ್.ಆಕ್ಟ್-2023) ಪ್ರಕರಣ ದಾಖಲಾಗಿತ್ತು.
ಹೆಚ್.ಹನುಮಂತ @ ಬಳ್ಳಾರಿ ಹನುಮಂತ (27) – ಕೊಳಗಲ್ ರಸ್ತೆ, ಬಳ್ಳಾರಿ
ಎ.ಆಕಾಶ್ (26) – ಆಜಾದ್ ನಗರ, ಹೊಸಪೇಟೆ
ಕೆ.ಚಂದ್ರಶೇಖರ್ (59) – ಆಜಾದ್ ನಗರ, ಹೊಸಪೇಟೆ
ಪರುಶುರಾಮ್ (28) – ಬಾಳೇಹೊಸೂರು, ಶಿರಹಟ್ಟಿ ತಾಲ್ಲೂಕು, ಗದಗ
ಬಂಧಿತ ಆರೋಪಿಗಳು ಕರ್ನಾಟಕದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ 06ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಕುಶಲ್ ಚೌಕ್ಸ್, ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ್ ರೈ ರವರ ಸಾರಥ್ಯದಲ್ಲಿ, ಡಿವೈ.ಎಸ್.ಪಿ ಪ್ರಕಾಶ್ ರೆಡ್ಡಿ ಮಾರ್ಗದರ್ಶನದಲ್ಲಿ ಬಾಗೇಪಲ್ಲಿ ಪಿ.ಐ ಅಜಯ್ ಸಾರಥಿ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪಿ.ಎಸ್.ಐ ಸುನೀಲ್ ಕುಮಾರ್, ಸಿಬ್ಬಂದಿಗಳಾದ ಮೋಹನ್ ಕುಮಾರ್, ಕೃಷ್ಣಪ್ಪ, ಶ್ರೀನಾಥ್, ಅನಿಲ್ಕುಮಾರ್, ಪ್ರಸಾದ್, ಲಕ್ಷ್ಮೀಪತಿ, ನಾಗಾರ್ಜುನ, ವೆಂಕಟಶಿವ, ಧನಂಜಯ, ಶಂಕರಪ್ಪ, ಪ್ರಿಯಾಂಕ, ನೇತ್ರಮ್ಮ ಹಾಗೂ ಚಾಲಕ ನೂರ್ ಬಾಷಾ ಅವರ ಕಾರ್ಯವನ್ನು ಎಸ್ಪಿ ಕುಶಲ್ ಚೌಕ್ಸ್ ಶ್ಲಾಘಿಸಿದ್ದಾರೆ.




