ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ‘ಚಾದರ್’ ಆಚರಣೆ – ಭಕ್ತರ ಆಕ್ರೋಶ, ಬೃಹತ್ ಪ್ರತಿಭಟನೆಗೆ ಕರೆ

ಸಿದ್ದಾಪುರ (ಕೊಡಗು): ಮಾಲ್ದಾರೆ-ಮತ್ತೂರು ಬಳಿಯ ಇತಿಹಾಸ ಪ್ರಸಿದ್ಧ ಗದ್ದಿ ಬೆಟ್ಟದ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅನ್ಯಕೋಮಿನ ಗುಂಪೊಂದು ಮುಸ್ಲಿಂ ಸಂಪ್ರದಾಯದಂತೆ ‘ಚಾದರ್ ಚಢಾನಾ’ ಆಚರಣೆ ನಡೆಸಿದ್ದು, ಸ್ಥಳದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ದೇಗುಲದ ಜಾಗದಲ್ಲಿ ಗೋರಿ ಮಾದರಿಯ ಅಲಂಕಾರ ಮಾಡಿ ಪ್ರಾರ್ಥನೆ ಸಲ್ಲಿಸಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಹಾಗೂ ಧಾರ್ಮಿಕ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮತ್ತು ಭಕ್ತಾದಿಗಳು ಕೃತ್ಯವನ್ನು ಉಗ್ರವಾಗಿ ಖಂಡಿಸಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ದೇವಾಲಯಕ್ಕೆ ಹಿಂದೂ ಭಕ್ತರು ಪೂಜೆಗೆ ಆಗಮಿಸುವಾಗ ನಿರ್ಬಂಧ ಹೇರುವ ಅರಣ್ಯ ಇಲಾಖೆ, ಕಾರಿನಲ್ಲಿ ಬಂದ ಅನ್ಯಕೋಮಿನ ಗುಂಪಿಗೆ ಹೇಗೆ ಅನುಮತಿ ನೀಡಿತು ಎಂದು ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅರಣ್ಯ ಇಲಾಖೆಯ ಬೋರ್ಡ್ಗಳ ಮೇಲೆಯೂ ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯಿಂದ ದೇವಾಲಯದ ಪಾವಿತ್ರತೆಗೆ ಧಕ್ಕೆಯಾಗಿದೆ ಎಂದು ಖಂಡಿಸಿರುವ ವಿವಿಧ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ತಕ್ಷಣವೇ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ.



