ಹಾದ್ರಿಪುರ ಗ್ರಾ.ಪಂನಲ್ಲಿ ಕತ್ತಲಲ್ಲಿ ಕೆಲಸ: ಅಮಾನತ್ತಾಗಿದ್ದ ಮಾಜಿ ಪಿಡಿಓ ರಾತ್ರಿ ವೇಳೆಯಲ್ಲಿ ಪ್ರತ್ಯಕ್ಷ, ಸ್ಥಳೀಯರ ಅನುಮಾನ!

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲೂಕಿನ ಹಾದ್ರಿಪುರ ಗ್ರಾಮ ಪಂಚಾಯತಿಯಲ್ಲಿ ರಾತ್ರಿ 8:30ರ ಸುಮಾರಿಗೆ, ಈ ಹಿಂದೆ ಅಮಾನತ್ತಾಗಿದ್ದ ಮಾಜಿ ಪಿಡಿಓ ಒಬ್ಬರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಗಂಭೀರ ಆರೋಪ ಬೆಳಕಿಗೆ ಬಂದಿದೆ.
ಪಂಚಾಯತಿ ಕಚೇರಿಯ ಲೈಟ್‌ಗಳನ್ನು ಆಫ್ ಮಾಡಿ, ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಸ್ಥಿತಿಯಲ್ಲೇ ಸಿಬ್ಬಂದಿಯನ್ನು ಕೂರಿಸಿಕೊಂಡು ಕೆಲಸ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ತೆರಳಿ ಪ್ರಶ್ನಿಸಿದಾಗ, “ಆಡಿಟಿಂಗ್ ಕೆಲಸ ನಡೆಯುತ್ತಿದೆ” ಎಂದು ಸಮಜಾಯಿಷಿ ನೀಡಿ ಮಾಜಿ ಪಿಡಿಓ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಪ್ರಕರಣದ ಪ್ರಮುಖ ಅಂಶಗಳು:
ಅಮಾನತುಗೊಂಡಿದ್ದ ಪಿಡಿಓ ಪ್ರತ್ಯಕ್ಷ: ಲಂಚ ಸ್ವೀಕಾರದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಮಾಜಿ ಪಿಡಿಓ ಶಿವಾನಂದ ಮಡಕೇರಿ ಅವರು, ಅಮಾನತ್ತಿನ ಅವಧಿಯಲ್ಲಿದ್ದರೂ ರಾತ್ರಿ ವೇಳೆ ಪಂಚಾಯತಿ ಕಚೇರಿಗೆ ಬಂದು ಕೆಲಸ ನಿರ್ವಹಿಸುತ್ತಿದ್ದುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಹಾಲಿ ಪಿಡಿಓ ಗೈರು ಹಾಜರಿ: ಕಚೇರಿಯಲ್ಲಿ ಮಾಜಿ ಪಿಡಿಓ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಹಾಲಿ ಪಿಡಿಓ ನಂದಿನಿ ಅವರು ಸ್ಥಳದಲ್ಲಿ ಇಲ್ಲದಿರುವುದು ಸ್ಥಳೀಯರ ಸಂಶಯವನ್ನು ಮತ್ತಷ್ಟು ಹೆಚ್ಚಿಸಿದೆ.
ತನಿಖೆಗೆ ಸ್ಥಳೀಯ ಮುಖಂಡರ ಒತ್ತಾಯ: ಮಾಜಿ ಪಿಡಿಓ ವಿರುದ್ಧ ಈ ಹಿಂದೆಯೂ ಅನೇಕ ಭ್ರಷ್ಟಾಚಾರದ ಆರೋಪಗಳಿದ್ದವು. ಈಗ ಕತ್ತಲಲ್ಲಿ ಕಚೇರಿ ತೆರೆದು ಕೆಲಸ ಮಾಡುತ್ತಿರುವುದರ ಹಿಂದೆ ದಾಖಲೆಗಳ ತಿದ್ದುಪಡಿ ಅಥವಾ ಅಕ್ರಮ ಎಸಗುವ ಸಂಚಿದೆಯೇ ಎಂಬ ಬಗ್ಗೆ ಮೇಲಾಧಿಕಾರಿಗಳು ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸ್ಥಳೀಯ ಮುಖಂಡ ಮಹೇಶ್ ಗೌಡ ಆಗ್ರಹಿಸಿದ್ದಾರೆ.
ಹಾಲಿ ಪಿಡಿಓ ಸ್ಪಷ್ಟನೆ:
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಾಲಿ ಪಿಡಿಓ ನಂದಿನಿ, “ಕಚೇರಿಯಲ್ಲಿ ಆಡಿಟಿಂಗ್ ಇದ್ದ ಕಾರಣ ಮೇಲಾಧಿಕಾರಿಗಳು ಸಂಜೆ 5 ಗಂಟೆಗೆ ಆಗಮಿಸಿದ್ದರು. ನಾನು ಸಂಜೆ 7:30ರವರೆಗೆ ಪಂಚಾಯತಿಯಲ್ಲೇ ಇದ್ದೆ. ನಾನು ಕಚೇರಿಯಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಈ ಘಟನೆ ನಡೆದಿದೆ,” ಎಂದು ತಿಳಿಸಿದ್ದಾರೆ.



