ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುರಾಜಕೀಯರಾಜ್ಯ ಸುದ್ದಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏಪ್ರಿಲ್ 16 ರಂದು ಬೃಹತ್ ಜಾತ: ಕೆ.ಎಸ್. ಈಶ್ವರಪ್ಪ ಎಚ್ಚರಿಕೆ

Share News

ಶಿವಮೊಗ್ಗ: ಪರಿಸರಕ್ಕೆ ಮಾರಕವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಏಪ್ರಿಲ್ 16 ರಂದು ಶಿವಮೊಗ್ಗ ನಗರದಲ್ಲಿ ಬೃಹತ್ ಸೈಕಲ್, ಕಾರು ಹಾಗೂ ಬೈಕ್ ಜಾತ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

​ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟದ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.

ಪರಿಸರಕ್ಕಾಗಿ ನಾವು’ ಮತ್ತು ‘ರಾಷ್ಟ್ರಭಕ್ತರ ಬಳಗ’ದ ಸಂಯುಕ್ತಾಶ್ರಯದಲ್ಲಿ ಈ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಏಪ್ರಿಲ್ 16 ರಂದು ಬೆಳಿಗ್ಗೆ ನಗರದ ಫ್ರೀಡಂ ಪಾರ್ಕ್‌ನಿಂದ ಆರಂಭವಾಗುವ ಈ ಜಾತವು ಸುಮಾರು 12 ಕಿಲೋ ಮೀಟರ್‌ಗಳವರೆಗೆ ಸಾಗಲಿದೆ. “ಪಶ್ಚಿಮ ಘಟ್ಟಗಳ ಉಳಿವಿಗಾಗಿ ಪರಿಸರಾಸಕ್ತರು ಈ ಮೂಲಕ ಸರ್ಕಾರದ ವಿರುದ್ಧ ಧ್ವನಿ ಎತ್ತಲಿದ್ದಾರೆ. ಜಾತದ ಸಂಪೂರ್ಣ ರೂಟ್ ಮ್ಯಾಪ್ ಅನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು,” ಎಂದು ಅವರು ವಿವರಿಸಿದರು.

ಯೋಜನೆಯ ವಿರುದ್ಧ ಈಗಾಗಲೇ ತೀವ್ರ ಸ್ವರೂಪದ ಹೋರಾಟಗಳು ನಡೆಯುತ್ತಿವೆ ಎಂದು ತಿಳಿಸಿದ ಈಶ್ವರಪ್ಪ, “ಈಗಾಗಲೇ 65,000ಕ್ಕೂ ಅಧಿಕ ಜನರು ಆನ್‌ಲೈನ್ ಮೂಲಕ ಸಹಿ ಸಂಗ್ರಹ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಅಹೋರಾತ್ರಿ ಧರಣಿಗಳೂ ನಡೆದಿವೆ. ಈ ಹಿಂದೆ ಕೆಪಿಸಿಎಲ್ (KPCL) ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ನಮ್ಮ ತಜ್ಞರ ತಂಡ 32ಕ್ಕೂ ಹೆಚ್ಚು ತಾಂತ್ರಿಕ ಪ್ರಶ್ನೆಗಳನ್ನು ಕೇಳಿತ್ತು. ಆದರೆ ಅಧಿಕಾರಿಗಳು ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ. ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಸತ್ಯ ಮರೆಮಾಚುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ,” ಎಂದು ಗಂಭೀರ ಆರೋಪ ಮಾಡಿದರು.

ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಮುಖ ಪರಿಸರವಾದಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳು ಈ ಚಳವಳಿಗೆ ಸಾಥ್ ನೀಡುತ್ತಿವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ವಿವಾದಿತ ಯೋಜನೆಯನ್ನು ರದ್ದುಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ರಾಜ್ಯಾದ್ಯಂತ ತೀವ್ರಗೊಳಿಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

​ಸುದ್ದಿಗೋಷ್ಠಿಯಲ್ಲಿ ಪರಿಸರ ಹೋರಾಟಗಾರರು ಹಾಗೂ ರಾಷ್ಟ್ರಭಕ್ತರ ಬಳಗದ ಪ್ರಮುಖರು ಉಪಸ್ಥಿತರಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!