ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಯಾದಗಿರಿ ಕನಕ ಸರ್ಕಲ್‌ನಲ್ಲಿ ತೆರೆದ ಗುಂಡಿ: ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ, ಕಲ್ಲು ಇಟ್ಟು ದಾರಿ ತೋರಿಸುತ್ತಿರುವ ಸವಾರರು

Share News

ಯಾದಗಿರಿ: ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಕನಕ ಸರ್ಕಲ್‌ನಲ್ಲಿ ಪೈಪ್‌ಲೈನ್ ಕಾಮಗಾರಿಗಾಗಿ ತೋಡಲಾಗಿದ್ದ ರಸ್ತೆ ಮಧ್ಯದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೆ ಹಾಗೇ ಬಿಟ್ಟಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಪ್ರಮುಖ ವೃತ್ತದಲ್ಲಿ ತೆರೆದ ಗುಂಡಿ ಇದೀಗ ಸವಾರರ ಪಾಲಿಗೆ ಸಂಚಕಾರವಾಗಿ ಪರಿಣಮಿಸಿದೆ.

ಗುಂಡಿ ಇರುವ ಸ್ಥಳದಲ್ಲಿ ನಗರಸಭೆಯಿಂದ ಯಾವುದೇ ಮುನ್ನೆಚ್ಚರಿಕೆ ಫಲಕವಾಗಲಿ ಅಥವಾ ಬ್ಯಾರಿಕೇಡ್‌ಗಳನ್ನಾಗಲಿ ಅಳವಡಿಸಿಲ್ಲ. ಹೀಗಾಗಿ ಸಂಭವಿಸಬಹುದಾದ ಭೀಕರ ಅಪಘಾತಗಳನ್ನು ತಪ್ಪಿಸಲು ಸ್ಥಳೀಯರು ಹಾಗೂ ವಾಹನ ಸವಾರರೇ ಗುಂಡಿಯ ಸುತ್ತ ಕಲ್ಲುಗಳನ್ನು ಜೋಡಿಸಿ ಇಟ್ಟು, ಬರುವ ಇತರ ಸವಾರರಿಗೆ ದಾರಿ ತೋರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷವಾಗಿ ಬೆಳಗಿನ ಹಾಗೂ ಸಂಜೆಯ ದಟ್ಟಣೆಯ ವೇಳೆಯಲ್ಲಿ ಈ ಮಾರ್ಗದಲ್ಲಿ ವಾಹನ ಸವಾರರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇನ್ನು ರಾತ್ರಿ ವೇಳೆಯಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ, ಈ ಗುಂಡಿ ವಾಹನ ಸವಾರರ ಕಣ್ಣಿಗೆ ಬೀಳುತ್ತಿಲ್ಲ. ಇದರಿಂದಾಗಿ ಯಾವುದೇ ಕ್ಷಣದಲ್ಲಿ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ. ಪೈಪ್‌ಲೈನ್ ಕಾಮಗಾರಿ ಮುಗಿದು ಹಲವು ದಿನಗಳೇ ಕಳೆದಿದ್ದರೂ, ರಸ್ತೆಯನ್ನು ಮೊದಲಿನ ಸ್ಥಿತಿಗೆ ತರಲು ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಗರಸಭೆಯ ಈ ಬೇಜವಾಬ್ದಾರಿತನದ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ರಸ್ತೆಯ ದುಃಸ್ಥಿತಿಯ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ಸದ್ಯ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

​ಜಿಲ್ಲಾಡಳಿತ ಹಾಗೂ ನಗರಸಭೆಯ ಉನ್ನತ ಅಧಿಕಾರಿಗಳು ತಕ್ಷಣವೇ ಈ ನಿಟ್ಟಿನಲ್ಲಿ ಗಮನಹರಿಸಿ ತೆರೆದಿರುವ ಗುಂಡಿಯನ್ನು ಮುಚ್ಚಿ ರಸ್ತೆ ಸಂಚಾರವನ್ನು ಸುರಕ್ಷಿತಗೊಳಿಸಬೇಕು. ಸಾರ್ವಜನಿಕರ ಪ್ರಾಣದ ಜತೆ ಚೆಲ್ಲಾಟವಾಡುತ್ತಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!