ಕರ್ನಾಟಕ ಬಜೆಟ್ 2026-27: “ಅಭಿವೃದ್ಧಿ ಶೂನ್ಯ, ಸಾಲದ ಗೂಡು” – ಸರ್ಕಾರದ ವಿರುದ್ಧ ಎಎಪಿ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು, ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚುವ ‘ಬೊಗಳೆ ಬಜೆಟ್’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ತೀವ್ರವಾಗಿ ಟೀಕಿಸಿದ್ದಾರೆ. ರಾಜ್ಯವನ್ನು ಸಾಲದ ಸುಳಿಗೆ ದೂಡಿರುವ ಕಾಂಗ್ರೆಸ್ ಸರ್ಕಾರ, ಅಭಿವೃದ್ಧಿಯ ಹೆಸರಿನಲ್ಲಿ ಹಗಲು ದರೋಡೆಗೆ ಇಳಿದಿದೆ ಎಂದು ಅವರು ಆರೋಪಿಸಿದ್ದಾರೆ.
ಬಜೆಟ್ ಕುರಿತು ಅವರು ವ್ಯಕ್ತಪಡಿಸಿರುವ ಪ್ರಮುಖ ಆಕ್ಷೇಪಣೆಗಳು ಇಲ್ಲಿವೆ: 1. ಸಾಲದ ಸುಳಿಯಲ್ಲಿ ಕರ್ನಾಟಕ: “ಕುಡುಕರ ರಾಜ್ಯ”ವಾಗಿಸುವ ಹುನ್ನಾರ?
ರಾಜ್ಯದ ಸಾಲದ ಮೊತ್ತ 8 ಲಕ್ಷ ಕೋಟಿ ರೂ. ದಾಟಿದ್ದು, ಇದನ್ನು ತೀರಿಸಲು ಸರ್ಕಾರ ಯಾವುದೇ ಶ್ವೇತಪತ್ರ ಹೊರಡಿಸದಿರುವುದು ದುರಂತ.
ಸಾಲದ ಬಡ್ಡಿ ಪಾವತಿಗಾಗಿಯೇ 46,000 ಕೋಟಿ ರೂ. ಮೀಸಲಿಡಲಾಗಿದೆ. ಈ ಹಣವನ್ನು ಸರಿದೂಗಿಸಲು ಅಬಕಾರಿ ಇಲಾಖೆಯಿಂದ 45,000 ಕೋಟಿ ರೂ. ಆದಾಯ ನಿರೀಕ್ಷಿಸುವ ಮೂಲಕ ಸರ್ಕಾರ ಕರ್ನಾಟಕವನ್ನು **’ಕುಡುಕರ ರಾಜ್ಯ’**ವನ್ನಾಗಿ ಮಾಡಲು ಹೊರಟಿದೆ.
2. ನೈಸರ್ಗಿಕ ಸಂಪತ್ತಿನ ಲೂಟಿ ಮತ್ತು ಭ್ರಷ್ಟಾಚಾರ
ಗಣಿಗಾರಿಕೆ ಲೈಸೆನ್ಸ್‌ಗಳ ಮೂಲಕ 11,000 ಕೋಟಿ ರೂ. ನಿರೀಕ್ಷಿಸುತ್ತಿರುವುದು ಅಕ್ರಮ ಗಣಿಗಾರಿಕೆಗೆ ಕೆಂಪು ಹಾಸು ಹಾಸಿದಂತಿದೆ. ಈಗಾಗಲೇ ಬಾಕಿ ಇರುವ 20,000 ಕೋಟಿ ರೂ. ದಂಡ ವಸೂಲಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಬೆಂಗಳೂರಿನಲ್ಲಿ 3,000 ಕೋಟಿ ರೂ. ವೆಚ್ಚದ ವೈಟ್ ಟಾಪಿಂಗ್ ಯೋಜನೆ ಕೇವಲ ಕಮಿಷನ್ ದಂಧೆಯಾಗಿದ್ದು, ಡಾಂಬರೀಕರಣದ ಬದಲು ಕಾಂಕ್ರೀಟ್ ಸುರಿಯುವುದು ತೆರಿಗೆದಾರರ ಹಣದ ಲೂಟಿ ಎಂದು ಕಿಡಿಕಾರಿದ್ದಾರೆ.
3. ಪ್ರಾದೇಶಿಕ ಅಸಮಾನತೆ ಮತ್ತು ರಾಜಕೀಯ ಪ್ರೇರಿತ ಅನುದಾನ
ಉತ್ತರ ಕರ್ನಾಟಕಕ್ಕೆ ಅನ್ಯಾಯ: ಮೈಸೂರು ಮತ್ತು ತುಮಕೂರಿಗೆ ಮಾತ್ರ ಕ್ಯಾನ್ಸರ್ ಆಸ್ಪತ್ರೆ ಘೋಷಿಸಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ.
ಉಪಚುನಾವಣೆ ಗಿಮಿಕ್: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮಾತ್ರ 100 ಕೋಟಿ ರೂ. ಘೋಷಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಮತಬ್ಯಾಂಕ್ ರಾಜಕೀಯದ ಪರಮಾವಧಿ.
4. ಸಾರಿಗೆ ಮತ್ತು ಆರೋಗ್ಯ ಕ್ಷೇತ್ರದ ದುಸ್ಥಿತಿ
ಸಾರಿಗೆ ನೌಕರರ 4,500 ಕೋಟಿ ರೂ. ಹಿಂಬಾಕಿ ವೇತನಕ್ಕೆ ಕೇವಲ 1,250 ಕೋಟಿ ರೂ. ಬಿಡುಗಡೆ ಮಾಡಿರುವುದು ನೌಕರರನ್ನು ಜೀತದಾಳುಗಳನ್ನಾಗಿ ಮಾಡುವ ಸಂಚು.
4,500 ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಪ್ರಕ್ರಿಯೆಯು ಖಾಸಗಿ ಕಂಪನಿಗಳ ಹಿತಾಸಕ್ತಿ ಕಾಯುವ ಬೃಹತ್ ದಂದೆಯಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ದೆಹಲಿಯ ‘ಮೊಹಲ್ಲಾ ಕ್ಲಿನಿಕ್’ ಮಾದರಿ ಜಾರಿಗೆ ತರುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ. ಟ್ರಾಮಾ ಕೇರ್ ಸೆಂಟರ್‌ಗಳಿಗೆ ನೀಡಿರುವ 10 ಕೋಟಿ ರೂ. ಅನುದಾನ ಹಾಸ್ಯಾಸ್ಪದವಾಗಿದೆ.
5. ಯುವಜನತೆ ಮತ್ತು ಮೂಲಸೌಕರ್ಯದ ನಿರ್ಲಕ್ಷ್ಯ
ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ **’ಯುವನಿಧಿ’**ಗೆ ಈ ಬಜೆಟ್‌ನಲ್ಲಿ ಸೂಕ್ತ ಅನುದಾನವಿಲ್ಲದೆ ಪದವೀಧರ ನಿರುದ್ಯೋಗಿಗಳಿಗೆ ಮೋಸ ಮಾಡಲಾಗಿದೆ.
ಉಪನಗರ ರೈಲು ಯೋಜನೆಗೆ ನೀಡಿರುವ ಅಲ್ಪ ಮೊತ್ತವನ್ನು ನೋಡಿದರೆ ಈ ಯೋಜನೆ ಮುಗಿಯಲು ಇನ್ನೊಂದು ದಶಕ ಬೇಕಾಗಬಹುದು.
ಬೆಂಗಳೂರನ್ನು ಐದು ಭಾಗಗಳಾಗಿ ವಿಂಗಡಿಸಿ ಕೇವಲ 1,125 ಕೋಟಿ ರೂ. ನೀಡಿರುವುದು ಬಿಬಿಎಂಪಿಯ ಅಧಿಕಾರ ವಿಕೇಂದ್ರೀಕರಣಕ್ಕೆ ಎಳ್ಳುನೀರು ಬಿಟ್ಟಂತಿದೆ.



