*ಬೆಂಗಳೂರಿಗರಿಗೆ ಬೆಲೆ ಏರಿಕೆ ಬಿಸಿ: ಅಡುಗೆ ಎಣ್ಣೆ ದರದಲ್ಲಿ ದಿಢೀರ್ ಏರಿಕೆ!*

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಪರಿಣಾಮ ಇದೀಗ ನೇರವಾಗಿ ಕನ್ನಡಿಗರ ಅಡುಗೆ ಮನೆಯ ಮೇಲೆ ಬೀಳುತ್ತಿದೆ. ಯುದ್ಧದ ಭೀತಿಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಡುಗೆ ಎಣ್ಣೆಯ ದರ ಗಗನಕ್ಕೇರಿದೆ.
ಒಂದೇ ವಾರದಲ್ಲಿ ದರ ಏರಿಕೆ: ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಸತತ ಏರಿಕೆ ಕಂಡುಬಂದಿದೆ. ಕೇವಲ ಒಂದು ವಾರದಲ್ಲಿ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಷ್ಟು ಹೆಚ್ಚಳವಾಗಿದೆ.
ಪ್ರಸ್ತುತ ದರ: ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆಯ ಬೆಲೆ ಈಗ ಅಂದಾಜು 168 ರೂಪಾಯಿ ತಲುಪಿದೆ.
ಆಮದು ವ್ಯತ್ಯಯ: ಭಾರತವು ತನ್ನ ಅಡುಗೆ ಎಣ್ಣೆಯ ಅಗತ್ಯಕ್ಕಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಸರಬರಾಜು ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ತೀವ್ರಗೊಂಡರೆ ಮುಂದಿನ ದಿನಗಳಲ್ಲಿ ಕೇವಲ ಅಡುಗೆ ಎಣ್ಣೆ ಮಾತ್ರವಲ್ಲದೆ, ಆಮದು ಮಾಡಿಕೊಳ್ಳುವ ಬೇಳೆಕಾಳುಗಳು ಸೇರಿದಂತೆ ಇತರೆ ದಿನಸಿ ಪದಾರ್ಥಗಳ ಬೆಲೆಯೂ ಕೂಡ ಏರಿಕೆಯಾಗುವ ಸಾಧ್ಯತೆಯಿದೆ.
*ವರದಿ :- ಆಂಟೋನಿ ಪತ್ರಕರ್ತ*