*ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅಬ್ಬರ: ಮಹಿಳೆಯರಿಗಾಗಿ ‘ಅನ್ನಪೂರ್ಣ ಸೂಪರ್ ಸಿಕ್ಸ್’ ಭರವಸೆಗಳ ಘೋಷಣೆ*

ಮಹಾಬಲಿಪುರಂ: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಭರ್ಜರಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಾರ್ಚ್ 7ರಂದು ಮಹಾಬಲಿಪುರಂನಲ್ಲಿ ನಡೆದ ಬೃಹತ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ವಿಜಯ್, ಅಧಿಕಾರಕ್ಕೆ ಬಂದರೆ ಜಾರಿಗೆ ತರಲಿರುವ ‘ಅನ್ನಪೂರ್ಣ ಸೂಪರ್ ಸಿಕ್ಸ್’ ಎಂಬ ಆರು ಪ್ರಮುಖ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ.
ಪ್ರಮುಖ ಆರು ಭರವಸೆಗಳು:
ಆರ್ಥಿಕ ನೆರವು: 60 ವರ್ಷದೊಳಗಿನ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,500 ರೂ. ಗೌರವ ಧನ.
ಉಚಿತ ಗ್ಯಾಸ್: ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 6 ಅಡುಗೆ ಅನಿಲ (LPG) ಸಿಲಿಂಡರ್ ಉಚಿತ.
ಮದುವೆ ಉಡುಗೊರೆ: ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ತಾಯಿಯ ಮನೆಯ ಸೀಮಂತದಂತೆ ಒಂದು ಸವರನ್ ಚಿನ್ನ ಮತ್ತು ರೇಷ್ಮೆ ಸೀರೆ ನೀಡಿಕೆ.
ಸುರಕ್ಷತಾ ಕ್ರಮ: ಸಾರ್ವಜನಿಕ ಸಾರಿಗೆ ಮತ್ತು ಶೇರ್ ಆಟೋಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ‘ಸ್ಮಾರ್ಟ್ ಪ್ಯಾನಿಕ್ ಬಟನ್’ ಅಳವಡಿಕೆ.
ಕಣ್ಗಾವಲು ವ್ಯವಸ್ಥೆ: ‘zero dark spots’ ಗುರಿಯೊಂದಿಗೆ ರಾಜ್ಯಾದ್ಯಂತ ಸಿಸಿಟಿವಿ ಮತ್ತು ಕೇಂದ್ರೀಕೃತ ಕಣ್ಗಾವಲು ಜಾಲದ ಮೂಲಕ ಮಹಿಳೆಯರಿಗೆ ಸುರಕ್ಷಿತ ಪರಿಸರ ನಿರ್ಮಾಣ.
ಶಿಶು ಕಲ್ಯಾಣ: ನವಜಾತ ಶಿಶುಗಳಿಗೆ ಚಿನ್ನದ ಉಂಗುರ ಹಾಗೂ ಅಗತ್ಯ ವಸ್ತುಗಳನ್ನೊಳಗೊಂಡ ‘ಬೇಬಿ ವೆಲ್ಕಮ್ ಕಿಟ್’ ವಿತರಣೆ.
ತಮ್ಮ ಯೋಜನೆಗಳನ್ನು ‘ಉಚಿತ’ ಎಂದು ಟೀಕಿಸುವವರಿಗೆ ತಿರುಗೇಟು ನೀಡಿದ ವಿಜಯ್, “ಜನರ ತೆರಿಗೆ ಹಣವನ್ನು ಜನರಿಗೇ ಮರಳಿಸುವುದು ಸರ್ಕಾರದ ಕರ್ತವ್ಯವೇ ಹೊರತು ಅದು ಉಚಿತ ಭಿಕ್ಷೆಯಲ್ಲ” ಎಂದಿದ್ದಾರೆ. ಇದೇ ವೇಳೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಜನರ ಹಣ ಸಾರ್ವಜನಿಕರಿಗೆ ತಲುಪುವ ಬದಲು ಮಂತ್ರಿಗಳ ಜೇಬು ಸೇರುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಚಿತ್ರರಂಗದ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಧುಮುಕಿರುವ ವಿಜಯ್, ಈ ‘ಸೂಪರ್ ಸಿಕ್ಸ್’ ಯೋಜನೆಗಳ ಮೂಲಕ ತಮಿಳುನಾಡಿನ ಮಹಿಳಾ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.
ರೈತರು ಮತ್ತು ಮೀನುಗಾರರ ಪರ ಭರವಸೆಗಳು
ಸಾಲ ಮನ್ನಾ: 5 ಎಕರೆವರೆಗೆ ಭೂಮಿ ಹೊಂದಿರುವ ರೈತರ ಸಹಕಾರಿ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. 5 ಎಕರೆಗಿಂತ ಹೆಚ್ಚು ಭೂಮಿ ಇರುವವರಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗುವುದು.
ಮೀನುಗಾರರ ರಕ್ಷಣೆ: ಕಡಲತೀರದಲ್ಲಿ ಮೀನುಗಾರರ ಸುರಕ್ಷತೆಯನ್ನು ಖಚಿತಪಡಿಸಲು ಮತ್ತು ಶ್ರೀಲಂಕಾ ನೌಕಾಪಡೆಯಿಂದ ಆಗುವ ಕಿರುಕುಳ ತಡೆಯಲು ಕೇಂದ್ರದ ಮೇಲೆ ಒತ್ತಡ ಹೇರುವ ಭರವಸೆ ನೀಡಿದ್ದಾರೆ.
ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ
ರಾಣಿ ವೇಲು ನಾಚಿಯಾರ್ ಪಡೆ: ಮಹಿಳೆಯರ ರಕ್ಷಣೆಗಾಗಿ ವಿಶೇಷ ಮಹಿಳಾ ಪೊಲೀಸರ ಪಡೆಯನ್ನು ರಚಿಸಲಾಗುವುದು. ಇವರು ನಾಗರಿಕ ಉಡುಪಿನಲ್ಲಿ (Plain clothes) ಬಾಡಿ ಕ್ಯಾಮೆರಾಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಣ್ಗಾವಲು ಇಡಲಿದ್ದಾರೆ.
ತ್ವರಿತ ನ್ಯಾಯ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಗಾಗಿ ಸ್ವಾತಂತ್ರ್ಯ ಹೋರಾಟಗಾರ್ತಿ ‘ಅಂಜಲೈ ಅಮ್ಮಾಳ್’ ಹೆಸರಿನಲ್ಲಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.
ಉಚಿತ ಸ್ಯಾನಿಟರಿ ಪ್ಯಾಡ್‌ಗಳು: ಸರ್ಕಾರಿ ಶಾಲೆಗಳು, ಕಾಲೇಜುಗಳು ಮತ್ತು ಪಡಿತರ ಅಂಗಡಿಗಳ ಮೂಲಕ ಮಹಿಳೆಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗುವುದು.
ವಿಶೇಷ ಇಲಾಖೆ: ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಏಳಿಗೆಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿ, ಅದು ನೇರವಾಗಿ ಮುಖ್ಯಮಂತ್ರಿಯವರ (ವಿಜಯ್) ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸಲಿದೆ.
ವಿಜಯ್ ಅವರು ತಮ್ಮ ಪಕ್ಷದ ಚಿಹ್ನೆಯಾದ ‘ಶೀಟಿ’ (Whistle) ಯನ್ನು ಉಲ್ಲೇಖಿಸುತ್ತಾ, ಇದು ಜನರ ಧ್ವನಿಯಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರಸಕ್ತ ಡಿಎಂಕೆ ಸರ್ಕಾರದ ಮೇಲೆ “ಸ್ಟಾಲಿನ್ ಸರ್ ಟ್ಯಾಕ್ಸ್” (ಭ್ರಷ್ಟಾಚಾರದ ಆರೋಪ) ಎಂದು ವ್ಯಂಗ್ಯವಾಡುವ ಮೂಲಕ ನೇರ ವಾಗ್ದಾಳಿ ನಡೆಸುತ್ತಿದ್ದಾರೆ.
*ವರದಿ :- ಆಂಟೋನಿ ಪತ್ರಕರ್ತ*



