ಎಲೆಕೊಡಿಗೇಹಳ್ಳಿಯಲ್ಲಿ ಇತಿಹಾಸ ಪ್ರಸಿದ್ಧ ‘ಶ್ರೀನಂದಿಬಸವೇಶ್ವರ’ ಭವ್ಯ ಮಂದಿರ ಲೋಕಾರ್ಪಣೆ: ಮಾರ್ಚ್ 8ಕ್ಕೆ ಧಾರ್ಮಿಕ ಸಂಭ್ರಮ

ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದ ಬೆಂಗಳೂರು ಉತ್ತರ ತಾಲ್ಲೂಕಿನ ಎಲೆಕೊಡಿಗೇಹಳ್ಳಿಯಲ್ಲಿ ಆನಾದಿಕಾಲದಿಂದಲೂ ಭಕ್ತರ ಆರಾಧ್ಯ ದೈವವಾಗಿ ನೆಲೆಸಿರುವ ಶ್ರೀನಂದಿಬಸವೇಶ್ವರ ಸ್ವಾಮಿಯ ನೂತನ ಭವ್ಯ ದೇವಾಲಯವು ಪುನರುತ್ಥಾನಗೊಂಡಿದ್ದು, ಮುಂಬರುವ ಮಾರ್ಚ್ 8ರಂದು ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ.
ಇತಿಹಾಸ ಮತ್ತು ಹಿನ್ನೆಲೆ:
ಜೋಳರ ಕಾಲದ ಪುಟ್ಟ ಗುಡಿಯಿಂದ ಆರಂಭವಾದ ಈ ಕ್ಷೇತ್ರವು ಇಂದು ಎಲೆಕೊಡಿಗೇಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಗಳ ಪಾಲಿನ ಶಕ್ತಿ ಕೇಂದ್ರವಾಗಿದೆ. ರೈತಾಪಿ ವರ್ಗದವರ ಆದಿದೇವತೆಯಾಗಿರುವ ಈ ಸ್ವಾಮಿಯ ದರ್ಶನಕ್ಕೆ ರಾಜ-ಮಹಾರಾಜರು ಹಾಗೂ ಗಣ್ಯರು ಭೇಟಿ ನೀಡುತ್ತಾ ಬಂದಿದ್ದಾರೆ.
ಗಣ್ಯರ ಭೇಟಿ: ಮೈಸೂರು ಸಂಸ್ಥಾನದ ನಾಲ್ವಡಿ ಜಯಚಾಮರಾಜೇಂದ್ರ ಒಡೆಯರ್, ರಂಭಾಪುರಿ ಪೀಠದ ಜಗದ್ಗುರುಗಳು ಹಾಗೂ ಚಿತ್ರರಂಗದ ದಿಗ್ಗಜರಾದ ಡಾ. ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಸೇರಿದಂತೆ ಅನೇಕರು ಇಲ್ಲಿ ಬಂದು ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ.
ಶಿಥಿಲಗೊಂಡಿದ್ದ ಹಳೆಯ ದೇಗುಲವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಭವ್ಯವಾಗಿ ಮರುನಿರ್ಮಾಣ ಮಾಡಲಾಗಿದೆ. ಈ ಪವಿತ್ರ ಕಾರ್ಯವು ಗ್ರಾಮದ ಯಜಮಾನರು ಹಾಗೂ ಶೆಟ್ಟರಾದ ಡಾ. ಎನ್. ನಂಜುಂಡೇಶ ಮತ್ತು ಎ. ಶಿವಣ್ಣ ಅವರ ನೇತೃತ್ವದಲ್ಲಿ, ಶ್ರೀ ಬಸವೇಶ್ವರಸ್ವಾಮಿ ದೇವರ ಸೇವಾ ಅಭಿವೃದ್ಧಿ ಟ್ರಸ್ಟ್ ಮೂಲಕ ಯಶಸ್ವಿಯಾಗಿ ನೆರವೇರಿದೆ. ಮುಖ್ಯ ದೇವಾಲಯದೊಂದಿಗೆ ಶ್ರೀಮಹಾಗಣಪತಿ ಮತ್ತು ಶ್ರೀಪಂಚಮುಖ ಶಿವಲಿಂಗೇಶ್ವರ ಸ್ವಾಮಿಯ ಮಂದಿರಗಳೂ ನವ ರೂಪ ಪಡೆದಿವೆ.
ಮಾರ್ಚ್ 8ರಂದು ನಡೆಯುವ ಉತ್ಸವದಲ್ಲಿ ದೇವಾಲಯ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ, ವಿಮಾನಗೋಪುರ ಶಿಖರ ಹಾಗೂ ಕಲಶಾರೋಹಣ ವಿಧಿವಿಧಾನಗಳು ಜರುಗಲಿವೆ.
ದೈವಿಕ ಸಾನ್ನಿಧ್ಯ: ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ಉಜ್ಜಯನಿ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ.
ರಾಜಕೀಯ ಗಣ್ಯರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಯದುವೀರಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಸಚಿವ ಈಶ್ವರ ಖಂಡ್ರೆ ಉಪಸ್ಥಿತರಿರುವರು.
ದೇವಾಲಯದ ಲೋಕಾರ್ಪಣೆಯ ಅಂಗವಾಗಿ ಗ್ರಾಮದ ರಾಜಬೀದಿಗಳಲ್ಲಿ ವಿವಿಧ ದೇವರುಗಳ ಉತ್ಸವ ನಡೆಯಲಿದೆ. ವೀರಗಾಸೆ, ಕರಡಿ ವಾದ್ಯ, ಗಾರುಡಿ ಗೊಂಬೆ, ಪೂಜಾ ಕುಣಿತ ಸೇರಿದಂತೆ ನಾಡಿನ ವೈವಿಧ್ಯಮಯ ಜಾನಪದ ಕಲಾತಂಡಗಳು ಈ ಸಂಭ್ರಮಕ್ಕೆ ಕಳೆ ತುಂಬಲಿವೆ.



