ರಾಜ್ಯ ಸುದ್ದಿಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುಸ್ಥಳೀಯ ಸುದ್ದಿಗಳು

ಮತಾಂತರ ಕಾಯ್ದೆಯ ದುರುಪಯೋಗದಿಂದ ಕ್ರೈಸ್ತರ ಮೇಲೆ ಸುಳ್ಳು FIR ದಾಖಲಾತಿ: ಕರ್ನಾಟಕ ಕ್ರೈಸ್ತ ಸಂಘಟನೆ ಖಂಡನೆ

Share News

ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಇರುವ ಮತಾಂತರ ವಿರೋಧಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಕ್ರೈಸ್ತರ ಮೇಲೆ ಸುಳ್ಳು FIR ದಾಖಲಿಸುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ತೀವ್ರ ಅಕ್ರೋಶ ವ್ಯಕ್ತಪಡಿಸಿದೆ. ಈ ಪರಿಸ್ಥಿತಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಸಂಘಟನೆ ತಿಳಿಸಿದೆ.

ಭಾರತದ ಸಂವಿಧಾನದ ವಿಧಿ 25 ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೂ ಆತ್ಮಸಾಕ್ಷಿಯ ಸ್ವಾತಂತ್ರ್ಯ ಹಾಗೂ ತನ್ನ ಧರ್ಮವನ್ನು ಸ್ವತಂತ್ರವಾಗಿ ಆಚರಿಸುವುದು, ಪ್ರತಿಪಾದಿಸುವುದು ಮತ್ತು ಪ್ರಚಾರ ಮಾಡುವ ಹಕ್ಕುಗಳನ್ನು ಖಾತರಿಪಡಿಸಲಾಗಿದೆ. ಆದರೆ ಪ್ರಸ್ತುತ ಜಾರಿಯಲ್ಲಿರುವ ಮತಾಂತರ ಕಾಯ್ದೆಯ ಕಾರಣದಿಂದ ಕ್ರೈಸ್ತರಿಗೆ ಈ ಹಕ್ಕುಗಳನ್ನು ಅನುಷ್ಠಾನಗೊಳಿಸಲು ತೊಂದರೆ ಉಂಟಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಪ್ರಾರ್ಥನೆ ನಡೆಯುತ್ತಿರುವ ಸಮಯದಲ್ಲಿ ಚರ್ಚ್‌ಗಳೊಳಗೆ ಅಥವಾ ಮನೆಗಳೊಳಗೆ ನುಗ್ಗಿ ಕೆಲವರು ಗಲಾಟೆ ನಡೆಸುವುದು, ಕೊಲೆ ಬೆದರಿಕೆ ಹಾಕುವುದು ಹಾಗೂ ಸುಳ್ಳು ಪ್ರಕರಣಗಳನ್ನು ದಾಖಲಿಸುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಬಲವಂತದ ಮತಾಂತರ ಅಥವಾ ಆಮಿಷ ಒಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗುತ್ತಿದ್ದರೂ, ಇವುಗಳಿಗೆ ಯಾವುದೇ ಸ್ಪಷ್ಟವಾದ ದಾಖಲೆಗಳು ಇಲ್ಲದೆ ಕೇವಲ ಮೌಖಿಕ ಹೇಳಿಕೆಗಳ ಆಧಾರದಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಸಂಘಟನೆ ತಿಳಿಸಿದೆ.

ಇತ್ತೀಚೆಗೆ ಹಾವೇರಿ ಜಿಲ್ಲೆಯಲ್ಲಿ ಸುಮಾರು 20 ಜನರ ವಿರುದ್ಧ ಸುಳ್ಳು FIR ದಾಖಲಿಸಿರುವ ಘಟನೆ ನಡೆದಿದೆ. ಇವರಲ್ಲಿ 11 ಜನ ಮಹಿಳೆಯರು ಹಾಗೂ ವೃದ್ಧರು ಸೇರಿದ್ದಾರೆ. ಕೆಲವು ಮಹಿಳೆಯರು ಘಟನೆ ನಡೆದ ಸ್ಥಳದಲ್ಲೇ ಇಲ್ಲದಿದ್ದರೂ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಇದು ಮತಾಂತರ ಕಾಯ್ದೆಯ ಸ್ಪಷ್ಟ ದುರುಪಯೋಗವಲ್ಲವೇ ಎಂದು ಸಂಘಟನೆ ಪ್ರಶ್ನಿಸಿದೆ.

ಕೆಲವು ಸಂದರ್ಭಗಳಲ್ಲಿ ಮನೆಗಳಲ್ಲಿ ನಡೆಯುವ ಪ್ರಾರ್ಥನೆಯ ವೇಳೆ ಕುಟುಂಬಸ್ಥರೇ ಮನೆಯೊಳಗೆ ನುಗ್ಗಿ, ಅವರೊಂದಿಗೆ ಕೆಲವು ಸಂಘಟನೆಗಳ ಕಾರ್ಯಕರ್ತರು ಸೇರಿ ಗಲಾಟೆ ನಡೆಸಿರುವುದಾಗಿ ತಿಳಿದುಬಂದಿದೆ. ಬಲವಂತದ ಮತಾಂತರ ನಡೆದಿದೆ ಎಂದು ಆರೋಪ ಮಾಡಲಾಗುತ್ತಿದ್ದರೂ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಲಾಗುತ್ತಿಲ್ಲ. ಈ ಘಟನೆಗಳ ಹಿಂದೆ ಕುಟುಂಬ ಕಲಹಗಳು ಅಥವಾ ಜಮೀನು ವಿವಾದಗಳೂ ಕಾರಣವಾಗಿರುವುದಾಗಿ ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಮತಾಂತರ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ಆಗ್ರಹಿಸಿದೆ.

ಇದಲ್ಲದೆ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವ ಮುನ್ನ ಮತಾಂತರ ಕಾಯ್ದೆಯನ್ನು ಹಿಂಪಡೆಯುವ ಭರವಸೆ ನೀಡಿದ್ದರೂ ಇದುವರೆಗೂ ಆ ಕಾರ್ಯ ನಡೆಯದಿರುವುದು ಸಮಸ್ತ ಕ್ರೈಸ್ತ ಸಮುದಾಯಕ್ಕೆ ಬೇಸರವನ್ನುಂಟು ಮಾಡಿದೆ ಎಂದು ಸಂಘಟನೆ ತಿಳಿಸಿದೆ.

ಒಂದು ವೇಳೆ ಈ ಮತಾಂತರ ಕಾಯ್ದೆಯನ್ನು ಹಿಂಪಡೆಯದಿದ್ದರೆ, ಕರ್ನಾಟಕ ಕ್ರೈಸ್ತ ಸಂಘಟನೆ ವತಿಯಿಂದ ಧಾರ್ಮಿಕ ಹಕ್ಕುಗಳ ರಕ್ಷಣೆಗೆ ರಾಜ್ಯಮಟ್ಟದಲ್ಲಿ ಬೃಹತ್ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಕ್ರೈಸ್ತ ಸಂಘಟನೆ ರಾಜ್ಯದ್ಯಕ್ಷರಾದ ಸ್ಟ್ಯಾನಿ ಪಿಂಟೋ ರವರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಗೋಷ್ಠಿ ನಡೆಯುವ ಸಂದರ್ಭದಲ್ಲಿ ಕ್ರೈಸ್ತ ಸಂಘಟನೆ ರಾಜ್ಯಾಧ್ಯಕ್ಷರಾದ ಸ್ಟ್ಯಾನಿ ಪಿಂಟೋ ರವರು, ಕಾರ್ಯದರ್ಶಿಗಳಾದ ಶ್ಯಾಮ್ ರವರು, ಕೆಸಿಎಸ್ ಕಾನೂನು ಸಲಹೆಗಾರರಾದ ಶಾಲೋಮಿ ರವರು ಮತ್ತು ಹಾವೇರಿ ಜಿಲ್ಲೆಯಲ್ಲಿ ಸುಳ್ಳು ಕೇಸು ದಾಖಲಿಸಿಕೊಂಡಿರುವ ಪಾಸ್ಟರ್ ಬಸವರಾಜ್ ಮತ್ತು ರವಿ ರವರು ಹಾಗೂ ಪ್ರೊಟೆಸ್ಟೆಂಟ್ ಕ್ರೈಸ್ತರ ಮಹಾಸಭಾದಿಂದ ಆರ್ಚ್ ಬಿಷಪ್ ರೆವರೆಂಡ್ ಡಾ. ವಿನೋದ್ ಎಮ್ ಚಾಕೋ ರವರು, ಅಸಿಸ್ಟೆಂಟ್ ಆರ್ಚ್ ಬಿಷಪ್ ರೆವರೆಂಡ್ ಸುನಿಲ್ ವಿ ಜಾಕೋಬ್, ಸೈನೊಡ್ ಸೆಕ್ರೆಟರಿ ಬಿಷಪ್ ವಿನೈಲ್ ಮೋಸೆಸ್,

ಬಿಷಪ್ ಮೋಹನ್ ಡೇವಿಡ್, ಬಿಷಪ್ ವಿನಯ ಕುಮಾರ್ ಮತ್ತು ಬಿಷಪ್ ಕುರುಬಾಯ್ ನಾಥನ್ ರವರು ಉಪಸ್ಥಿತರಿದ್ದರು.

ವರದಿ :- ಆಂಟೋನಿ ಪತ್ರಕರ್ತ 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!