ಗ್ರಾಮೀಣ ಪ್ರತಿಭೆಗಳ ಅನಾವರಣ: ಡೆಬೋರಾ ಫೌಂಡೇಶನ್‌ನಿಂದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೇದಿಕೆ

ದೊಡ್ಡಬಳ್ಳಾಪುರ: ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಲ್ಲಿ ನಾಯಕತ್ವ ಗುಣ ಹಾಗೂ ಸುಪ್ತ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಡೆಬೋರಾ ಫೌಂಡೇಶನ್ ಇಂಡಿಯಾ ಸಂಸ್ಥೆಯು ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕುಗಳ ಸುಮಾರು 25 ಹಳ್ಳಿಗಳ ಶೈಕ್ಷಣಿಕ ಚಟುವಟಿಕೆ ಕೇಂದ್ರಗಳ ವಿದ್ಯಾರ್ಥಿಗಳು ಈ ವಿಶೇಷ ಸಮಾರಂಭದಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು.
ತಾಲ್ಲೂಕಿನ ತಪಸಿಹಳ್ಳಿಯ ಪುಷ್ಪಾಂಡಜ ಮಹರ್ಷಿ ಗುರುಕುಲ ಆಶ್ರಮ.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ. 25 ವಿವಿಧ ಗ್ರಾಮಗಳಿಂದ ಒಟ್ಟು 99 ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪುಷ್ಪಾಂಡಜ ಮಹರ್ಷಿ ಗುರುಕುಲ ಆಶ್ರಮದ ಶ್ರೀ ಸ್ವಾಮೀಜಿ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಕ್ಕಳು ದೇಶದ ಭವಿಷ್ಯ, ಅವರ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮತ್ತು ಶಿಕ್ಷಣದ ಮಹತ್ವ ಅಪಾರ” ಎಂದು ಹಿತನುಡಿಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ. ಅಧ್ಯಕ್ಷ ಶ್ರೀ ಕೃಷ್ಣಮೂರ್ತಿ, ಸೌಭಾಗ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀ ರಾಜಗೋಪಾಲ್, ಉದ್ಯಮಿಗಳಾದ ಶ್ರೀ ನರೇಶ್ ಮತ್ತು ಶ್ರೀಮತಿ ಸುಷ್ಮಾ ನರೇಶ್, ಡೆಬೋರಾ ಫೌಂಡೇಶನ್‌ನ ಪ್ರೋಗ್ರಾಮ್ ಕೊರ್ಡಿನೇಟರ್ ಥಾಮಸ್ ಲಾರೆನ್ಸ್ ಸೇರಿದಂತೆ ಹಲವು ಗಣ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.
ವಿವಿಧ ಹಳ್ಳಿಗಳಿಂದ ಬಂದಿದ್ದ ವಿದ್ಯಾರ್ಥಿ ತಂಡಗಳು ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ನೃತ್ಯಗಳಿಗೆ ಹೆಜ್ಜೆ ಹಾಕುವ ಮೂಲಕ ನೆರೆದಿದ್ದವರ ಮನ ಗೆದ್ದರು. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಇಂತಹ ವೇದಿಕೆಗಳು ಶಾಲಾ ಶಿಕ್ಷಣದ ಜೊತೆಗೆ ಅತ್ಯಗತ್ಯ ಎಂದು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕೆಗೆ ಪೂರಕವಾದ ಎಲೆಕ್ಟ್ರಾನಿಕ್ ರೈಟಿಂಗ್ ಪ್ಯಾಡ್‌ಗಳನ್ನು ವಿತರಿಸುವ ಮೂಲಕ ಅವರ ಸಾಧನೆಯನ್ನು ಗೌರವಿಸಲಾಯಿತು.
ಡೆಬೋರಾ ಫೌಂಡೇಶನ್ ಕಳೆದ ಹಲವು ಸಮಯದಿಂದ ಗ್ರಾಮೀಣ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಶಾಲಾ ಅವಧಿಯ ನಂತರ ‘ಶೈಕ್ಷಣಿಕ ಚಟುವಟಿಕೆ ಕೇಂದ್ರ’ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ವರದಿ :- ಆಂಟೋನಿ ಪತ್ರಕರ್ತ



