ದಾವಣಗೆರೆ ದಕ್ಷಿಣದ ಗೆಲುವು ರಾಜ್ಯ ರಾಜಕೀಯದ ದಿಕ್ಸೂಚಿ: ಬಿ.ವೈ. ವಿಜಯೇಂದ್ರ ಗುಡುಗು

ದಾವಣಗೆರೆ: “ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶವು ಕೇವಲ ಒಂದು ಕ್ಷೇತ್ರದ ಗೆಲುವಲ್ಲ, ಇದು ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಉಪಚುನಾವಣೆಯಲ್ಲಿ ಪಕ್ಷದ ವಿಜಯಕ್ಕಾಗಿ ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆ ನೀಡಿದರು.
ನಿಷ್ಠಾವಂತರಿಗೆ ಗೌರವ: “ವೇದಿಕೆಯ ಮೇಲಿರುವ ನಾಯಕರಿಗಿಂತ ಮುಂಭಾಗದಲ್ಲಿರುವ ನಿಷ್ಠಾವಂತ ಕಾರ್ಯಕರ್ತರೇ ನಮ್ಮ ಅತಿದೊಡ್ಡ ಆಸ್ತಿ. ಕಾರ್ಯಕರ್ತರಿಗೆ ಅವಮಾನ ಮಾಡದೆ, ಎಲ್ಲರೂ ಒಂದಾಗಿ ಮುನ್ನಡೆಯಬೇಕು,” ಎಂದು ವಿಜಯೇಂದ್ರ ಕಿವಿಮಾತು ಹೇಳಿದರು.
ಬಿಜೆಪಿಯ ವಿಶಿಷ್ಟತೆ: ಒಬ್ಬ ಸಾಮಾನ್ಯ ಚಹಾ ಮಾರುವ ವ್ಯಕ್ತಿಯೂ ದೇಶದ ಪ್ರಧಾನಿಯಾಗಬಹುದು ಎಂಬುದು ಕೇವಲ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬೂತ್ ಅಧ್ಯಕ್ಷರಿಗೂ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡುವಷ್ಟೇ ಗೌರವ ಸಿಗುವುದು ನಮ್ಮ ಪಕ್ಷದ ಸಂಸ್ಕೃತಿ ಎಂದು ಅವರು ಬಣ್ಣಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ: 6ನೇ ಗ್ಯಾರಂಟಿ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಪಂಚ ಗ್ಯಾರಂಟಿಗಳ ಜೊತೆಗೆ ‘ಬೆಲೆ ಏರಿಕೆ’ ಎಂಬ 6ನೇ ಗ್ಯಾರಂಟಿಯನ್ನು ಜನರಿಗೆ ಉಡುಗೊರೆಯಾಗಿ ನೀಡಿದೆ ಎಂದು ವ್ಯಂಗ್ಯವಾಡಿದರು.
ಹೈನುಗಾರರ ಕಣ್ಣೀರು: ಬಿಜೆಪಿ ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಹೈನುಗಾರರ 1,000 ಕೋಟಿ ರೂ.ಗೂ ಅಧಿಕ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡು ರೈತರಿಗೆ ವಂಚಿಸುತ್ತಿದೆ ಎಂದು ಆರೋಪಿಸಿದರು.
2014ರ ಪೂರ್ವದಲ್ಲಿ ದೇಶದ ಭವಿಷ್ಯದ ಬಗ್ಗೆ ಯುವಜನತೆಯಲ್ಲಿ ಆತಂಕವಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 12 ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬಹುದು ಎಂಬುದನ್ನು ಜಗತ್ತಿಗೆ ಋಜುವಾತುಪಡಿಸಿದ್ದಾರೆ ಎಂದು ಶ್ಲಾಘಿಸಿದರು.
2028ರ ಅಧಿಕಾರಕ್ಕೆ ಈ ಉಪಚುನಾವಣೆಯೇ ಅಡಿಪಾಯ:
ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗ್ರವಾಲ್ ಮಾತನಾಡಿ, “ದಾವಣಗೆರೆ ದಕ್ಷಿಣದಲ್ಲಿ ನಾವು ಗೆದ್ದರೆ, 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಪ್ರತಿಯೊಬ್ಬ ಮುಖಂಡರೂ ಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟಕ್ಕೆ ತೆರಳಿ ಕೆಲಸ ಮಾಡಬೇಕು,” ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.



