ಹೋಳಿ ಸಂಭ್ರಮದ ನಡುವೆ ರಕ್ತಪಾತ: ಯುವಕನ ಹತ್ಯೆಗೈದ ಆರೋಪಿ ಮನೆಗೆ ‘ಬುಲ್ಡೋಜರ್’ ಶಾಕ್!

ನವದೆಹಲಿ: ಬಣ್ಣಗಳ ಹಬ್ಬ ಹೋಳಿಯ ಸಡಗರದ ನಡುವೆ ದೆಹಲಿಯ ಉತ್ತಮ್ ನಗರದಲ್ಲಿ ನಡೆದ ಸಣ್ಣ ವಾಗ್ವಾದವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ನೀರಿನ ಬಲೂನ್ ಎಸೆದ ವಿಚಾರಕ್ಕೆ ಶುರುವಾದ ಕಿರಿಕ್, ಯುವಕನೊಬ್ಬನ ಪ್ರಾಣಪಕ್ಷಿ ಹಾರುವಂತೆ ಮಾಡಿದೆ. ಈ ಬೆನ್ನಲ್ಲೇ ಎಚ್ಚೆತ್ತ ಆಡಳಿತ ಮಂಡಳಿ, ಘಟನೆಯ ಪ್ರಮುಖ ಆರೋಪಿಯ ಅಕ್ರಮ ನಿರ್ಮಾಣದ ಮೇಲೆ ಬುಲ್ಡೋಜರ್ ಹರಿಸುವ ಮೂಲಕ ಕಠಿಣ ಸಂದೇಶ ರವಾನಿಸಿದೆ.
ಮಾಹಿತಿಯ ಪ್ರಕಾರ, ಹೋಳಿ ಆಡುವ ಸಂದರ್ಭದಲ್ಲಿ ಮಕ್ಕಳು ಎಸೆದ ನೀರಿನ ಬಲೂನ್ ಮಹಿಳೆಯೊಬ್ಬರಿಗೆ ತಗುಲಿದೆ. ಇದೇ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ನೋಡನೋಡುತ್ತಿದ್ದಂತೆಯೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಮಾರಕಾಸ್ತ್ರಗಳಿಂದ ನಡೆದ ಈ ಹಲ್ಲೆಯಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ಬಂಧನ: ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳು ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮ ತೆರವು: ಆರೋಪಿಗೆ ಸೇರಿದ ಕಟ್ಟಡವು ಅನಧಿಕೃತವಾಗಿ ನಿರ್ಮಾಣಗೊಂಡಿದೆ ಎಂದು ಗುರುತಿಸಿದ ಸ್ಥಳೀಯ ಆಡಳಿತ, ಕೂಡಲೇ ಬುಲ್ಡೋಜರ್ ಮೂಲಕ ಕಟ್ಟಡದ ಭಾಗಗಳನ್ನು ಧ್ವಂಸಗೊಳಿಸಿದೆ.
ಬಿಗಿ ಭದ್ರತೆ: ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಬಲೂನ್ ವಿಚಾರಕ್ಕೆ ಕೊಲೆ ನಡೆದದ್ದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದ್ದರೆ, ಇನ್ನೊಂದೆಡೆ ಆರೋಪಿಯ ಮನೆ ಮೇಲೆ ಬುಲ್ಡೋಜರ್ ಕ್ರಮ ಕೈಗೊಂಡಿರುವುದು ಇಂಟರ್ನೆಟ್ನಲ್ಲಿ ಪರ-ವಿರೋಧದ ಚರ್ಚೆಗಳಿಗೆ ವೇದಿಕೆಯಾಗಿದೆ. ಸದ್ಯ ಪೊಲೀಸರು ಪ್ರಕರಣದ ಪೂರ್ಣ ತನಿಖೆ ನಡೆಸುತ್ತಿದ್ದು, ಘಟನೆಯ ಹಿಂದಿನ ನಿಖರ ಕಾರಣಗಳ ಶೋಧ ಮುಂದುವರಿಸಿದ್ದಾರೆ.
ವರದಿ :- ಆಂಟೋನಿ ಪತ್ರಕರ್ತ


