*ಬೆಂಗಳೂರಿನಲ್ಲಿ ಏರ್ ಬಸ್ ಬೃಹತ್ ತಂತ್ರಜ್ಞಾನ ಕೇಂದ್ರ ಉದ್ಘಾಟನೆ: ವಿಮಾನಯಾನ ವಲಯದಲ್ಲಿ ಕರ್ನಾಟಕಕ್ಕೆ ಜಾಗತಿಕ ಮನ್ನಣೆ*

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ವಿಮಾನಯಾನ ಭೂಪಟದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ನಗರದ ಕಾಡುಗೋಡಿ ಸಮೀಪದ ಟೈಟಾನಿಯಂ ಟೆಕ್ ಪಾರ್ಕ್‌ನಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ‘ಏರ್ ಬಸ್ ಇಂಡಿಯಾ ಟೆಕ್ನಾಲಜಿ ಸೆಂಟರ್’ ಅನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಅಧಿಕೃತವಾಗಿ ಉದ್ಘಾಟಿಸಿದರು.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು ವರ್ಚುವಲ್ ಮೂಲಕ ಭಾಗವಹಿಸಿ ಈ ಯೋಜನೆಗೆ ಬೆಂಬಲ ಸೂಚಿಸಿದರು.
ಈ ನೂತನ ಕೇಂದ್ರದಲ್ಲಿ 5,000ಕ್ಕೂ ಹೆಚ್ಚು ತಾಂತ್ರಿಕ ಪರಿಣಿತರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ. ಇದು ಏರ್ ಬಸ್ ಕಂಪನಿಯ ವಿಶ್ವದ 2ನೇ ಅತಿದೊಡ್ಡ ಡಿಜಿಟಲ್ ಕೇಂದ್ರ ಹಾಗೂ 3ನೇ ಪ್ರಮುಖ ನಾವೀನ್ಯತಾ (Innovation) ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವೇಮಗಲ್ ಘಟಕದಿಂದ 2027ರ ಮಧ್ಯಭಾಗದ ವೇಳೆಗೆ ಮೊದಲ ಹೆಲಿಕಾಪ್ಟರ್ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ ಅವರು ರಾಜ್ಯದ ಪ್ರಗತಿಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡರು:
2033ರ ವೇಳೆಗೆ ಬೆಂಗಳೂರು ನಗರವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮಾನವಾದ ಮತ್ತೊಂದು ಬೃಹತ್ ವಿಮಾನ ನಿಲ್ದಾಣವನ್ನು ಹೊಂದಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಬಜೆಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ಕಾರ್ಯಸಾಧ್ಯತಾ ವರದಿ (Feasibility Report) ಸಿದ್ಧಪಡಿಸಲು ಸೂಚಿಸಿದ್ದಾರೆ.”
ಭಾರತದ ಒಟ್ಟು ವೈಮಾಂತರಿಕ್ಷ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಶೇ. 60ರಷ್ಟು ಪಾಲನ್ನು ಕರ್ನಾಟಕವೇ ಹೊಂದಿದೆ.
ರಾಜ್ಯದಲ್ಲಿ ಈಗಾಗಲೇ 400ಕ್ಕೂ ಹೆಚ್ಚು ರಕ್ಷಣಾ ವಲಯದ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.
ಏರ್ ಬಸ್ ಸಂಸ್ಥೆಯು ಭಾರತದೊಂದಿಗೆ ವಾರ್ಷಿಕ 1.5 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದ್ದು, ಅದರಲ್ಲಿ ಕರ್ನಾಟಕದ ಪಾಲು ಸಿಂಹಪಾಲಾಗಿದೆ.
ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಅವರು ಮಾತನಾಡಿ, “ಬೆಂಗಳೂರಿನ ಬೆಳವಣಿಗೆಯೇ ಭಾರತದ ಪ್ರಗತಿಯ ಪ್ರತಿಬಿಂಬ” ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಏರ್ ಬಸ್ ಇಂಡಿಯಾದ ಮುಖ್ಯಸ್ಥ ಜರ್ಗನ್ ವೆಸ್ಟರ್ಮೀಯರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
*ವರದಿ :- ಆಂಟೋನಿ ಪತ್ರಕರ್ತ*



