ಜಿಲ್ಲಾ ಸುದ್ದಿರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಬಟ್ಟೆ ಖರೀದಿಗೆ ಹೋದ ವಿದ್ಯಾರ್ಥಿ ಸಾವು: ಸ್ನೇಹಿತರಿಂದಲೇ ಮೃತದೇಹ ವಿಲೇವಾರಿ!

Share News

ಲಿಂಗಸೂಗೂರು ತಾಲ್ಲೂಕಿನ ಗುಂಡಸಾಗರ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ಕಾರ್ತಿಕ್ (15) ಎಂಬಾತನೇ ಮೃತಪಟ್ಟ ದುರ್ದೈವಿ. ಶಾಲೆಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭಕ್ಕಾಗಿ ಹೊಸ ಬಟ್ಟೆ ತರಲು ತನ್ನಿಬ್ಬರು ಸ್ನೇಹಿತರೊಂದಿಗೆ ಲಿಂಗಸೂಗೂರಿಗೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ.

ವಿದ್ಯುತ್ ಸ್ಪರ್ಶ: ದಾರಿಯ ಮಧ್ಯೆ ಬಾವಿಯೊಂದರಲ್ಲಿ ನೀರು ಕುಡಿಯಲು ಹೋದಾಗ ಕಾರ್ತಿಕ್‌ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಭಯಭೀತರಾದ ಸ್ನೇಹಿತರು: ಕಾರ್ತಿಕ್ ಮೃತಪಟ್ಟಿರುವುದನ್ನು ಕಂಡು ಆತನ ಜೊತೆಯಲ್ಲಿದ್ದ ಇಬ್ಬರು ಸ್ನೇಹಿತರು (10ನೇ ತರಗತಿ ವಿದ್ಯಾರ್ಥಿಗಳು) ತೀವ್ರ ಆತಂಕಕ್ಕೊಳಗಾಗಿದ್ದಾರೆ. ತಮ್ಮ ಮೇಲೆ ಆರೋಪ ಬರಬಹುದೆಂಬ ಭಯದಿಂದ ಅವರು ದೊಡ್ಡ ತಪ್ಪೆಸಗಿದ್ದಾರೆ.

ಶವ ವಿಲೇವಾರಿ: ಸ್ನೇಹಿತರು ಕಾರ್ತಿಕ್‌ನ ಶವವನ್ನು ಗೋಣಿ ಚೀಲದಲ್ಲಿ ತುಂಬಿ, ಬೈಕ್‌ನಲ್ಲಿ ಸಾಗಿಸಿ ಕರಡಕಲ್ ಕೆರೆಗೆ ಕಲ್ಲು ಕಟ್ಟಿ ಎಸೆದು ಗ್ರಾಮಕ್ಕೆ ವಾಪಸ್ಸಾಗಿದ್ದರು.

ರಾತ್ರಿಯಾದರೂ ಕಾರ್ತಿಕ್ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಆತನ ಜೊತೆಗೆ ಹೋಗಿದ್ದ ಸ್ನೇಹಿತರನ್ನು ತೀವ್ರವಾಗಿ ವಿಚಾರಿಸಿದಾಗ ಅವರು ನಡೆದ ಘಟನೆಯನ್ನು ಬಾಯಿಬಿಟ್ಟಿದ್ದಾರೆ. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕರಡಕಲ್ ಕೆರೆಯಲ್ಲಿ ಗೋಣಿ ಚೀಲದಲ್ಲಿದ್ದ ಶವವನ್ನು ಹೊರತೆಗೆಯಲಾಗಿದೆ.

ವರದಿ :- ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!