ಜಿಲ್ಲಾ ಸುದ್ದಿCrime Newsಕ್ರೈಂ ಸುದ್ದಿರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಮೂಡಲಗಿ: ಉಪ-ನೋಂದಣಾಧಿಕಾರಿಗೆ ಧಮ್ಕಿ, ಕರ್ತವ್ಯಕ್ಕೆ ಅಡ್ಡಿ; ಬಾಂಡ್‌ ರೈಟರ್‌ ಪೊಲೀಸರ ವಶಕ್ಕೆ!

Share News

ಬೆಳಗಾವಿ: ಸರ್ಕಾರಿ ಕರ್ತವ್ಯದ ಮೇಲಿದ್ದ ಉಪ-ನೋಂದಣಾಧಿಕಾರಿಗೆ ಕೆಲಸ ಮಾಡಲು ಬಿಡದೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಡೀಡ್ ರೈಟರ್ ಒಬ್ಬರನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.

ಗೋಕಾಕದ ಸೋಮವಾರ ಪೇಟೆ ನಿವಾಸಿ ಆನಂದ ಸಿದ್ದಲಿಂಗಪ್ಪಾ ಗೊಟಡಕಿ (52) ಬಂಧಿತ ಆರೋಪಿ. ಈತ ವೃತ್ತಿಯಲ್ಲಿ ಬಾಂಡ್‌ ರೈಟರ್‌ (ಡೀಡ್ ರೈಟರ್) ಆಗಿದ್ದು, ಜಮೀನು ನೋಂದಣಿ ವಿಚಾರದಲ್ಲಿ ಅಧಿಕಾರಿಯೊಂದಿಗೆ ಸಂಘರ್ಷಕ್ಕಿಳಿದಿದ್ದ ಎನ್ನಲಾಗಿದೆ.

ಮೂಡಲಗಿ ಉಪ-ನೋಂದಣಾಧಿಕಾರಿ ದುರದುಂಡೆಪ್ಪಾ ಕೆಂಪಣ್ಣಾ ಕುಳ್ಳೂರ ಅವರು ನೀಡಿದ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿ 1 ರಂದು ಅಧಿಕಾರ ವಹಿಸಿಕೊಂಡಿದ್ದ ಕುಳ್ಳೂರ ಅವರು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಆನಂದ ಗೊಟಡಕಿ ಜಮೀನೊಂದರ ನೋಂದಣಿಗೆ ಸಂಬಂಧಿಸಿದಂತೆ ಕಾವೇರಿ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿದ್ದರು.

ಮೂಡಲಗಿ ತಾಲೂಕಿನ ಸರ್ವೇ ನಂ. 521/11 ರ ಜಮೀನನ್ನು ನೋಂದಣಿ ಮಾಡಲು ಆರೋಪಿ ಒತ್ತಾಯಿಸಿದ್ದನು. ಆದರೆ, ಸದರಿ ಜಮೀನು ಜಂಟಿ ಖಾತೆದಾರರ ಹೆಸರಿನಲ್ಲಿದ್ದ ಕಾರಣ ಮತ್ತು ವಾರಸುದಾರರ ಸ್ಪಷ್ಟತೆ ಇಲ್ಲದ ಕಾರಣ, ತಹಶೀಲ್ದಾರರಿಂದ ಅಧಿಕೃತ ವಂಶವೃಕ್ಷ ತರುವಂತೆ ಅಧಿಕಾರಿ ಸೂಚಿಸಿದ್ದರು.

ಕೈಬರಹದ ವಂಶವೃಕ್ಷ ನಿರಾಕರಿಸಿ ಅಧಿಕೃತ ದಾಖಲೆ ಕೇಳಿದ್ದಕ್ಕೆ ಆಕ್ರೋಶಗೊಂಡ ಆರೋಪಿ ಆನಂದ, ಅಧಿಕಾರಿ ಕುಳ್ಳೂರ ಅವರಿಗೆ ಸಂಕಷ್ಟ ನೀಡಿದ್ದಾನೆ. “ನಿನಗೆ ಎಷ್ಟು ಹಣ ಬೇಕು ಹೇಳು, ಅಷ್ಟನ್ನು ಪಡೆದು ನೋಂದಣಿ ಮಾಡಲೇಬೇಕು. ಇಲ್ಲದಿದ್ದರೆ ನಿನ್ನನ್ನು ಏನು ಮಾಡಬೇಕು ಎಂದು ನನಗೆ ಗೊತ್ತು” ಎಂದು ಸಾರ್ವಜನಿಕವಾಗಿ ಧಮ್ಕಿ ಹಾಕಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಅಲ್ಲದೆ, ಭೂಮಾಪಕರು (Surveyors) 5 ಗುಂಟೆಗಿಂತ ಕಡಿಮೆ ಇದ್ದರೆ ನಕ್ಷೆ ಮಾಡಿಕೊಡುತ್ತಿಲ್ಲ, ನೀನೇ ಇದನ್ನು ಮಾಡಿಕೊಡಬೇಕು ಎಂದು ಅಬ್ಬರಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.

ಅಧಿಕಾರಿಯ ದೂರು ದಾಖಲಿಸಿಕೊಂಡ ಮೂಡಲಗಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ನೀಡುವ ಹಾಗೂ ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ನಿಯಮಾನುಸಾರ ಕೆಲಸ ಮಾಡುವ ಅಧಿಕಾರಿಗಳ ಪರವಾಗಿ ಸಾರ್ವಜನಿಕ ವಲಯದಲ್ಲಿ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ :-ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!