Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ಯಳಂದೂರು: ಸ್ವಾಭಿಮಾನಿ ವೃದ್ಧೆಯ ಅನುಮಾನಾಸ್ಪದ ಸಾವು; ನಗದು, ಆಭರಣ ಮಾಯ!

Share News

ಯಳಂದೂರು: ಮಕ್ಕಳಿದ್ದರೂ ಯಾರನ್ನೂ ಆಶ್ರಯಿಸದೆ, ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದ ವೃದ್ಧೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಮೃತದೇಹದ ಮೇಲಿದ್ದ ಚಿನ್ನಾಭರಣ ಹಾಗೂ ನಗದು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಗ್ರಾಮದ ನಿವಾಸಿ ಸಿದ್ದಮ್ಮ (83) ಮೃತಪಟ್ಟ ದುರ್ದೈವಿ. ಇವರಿಗೆ ಮೂವರು ಮಕ್ಕಳಿದ್ದರೂ ಸಹ, ತಾನು ಯಾರಿಗೂ ಹೊರೆಯಾಗಬಾರದೆಂಬ ಉದ್ದೇಶದಿಂದ ಪೆಟ್ಟಿಗೆ ಅಂಗಡಿ ನಡೆಸುತ್ತಾ ಒಬ್ಬಂಟಿಯಾಗಿ ವಾಸವಿದ್ದರು. ಸೋಮವಾರ ಬೆಳಿಗ್ಗೆ ಬಹಳ ಹೊತ್ತಾದರೂ ಸಿದ್ದಮ್ಮ ಅವರು ಅಂಗಡಿ ತೆರೆಯದಿದ್ದನ್ನು ಗಮನಿಸಿದ ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ, ವೃದ್ಧೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೃತ ಸಿದ್ದಮ್ಮ ಅವರ ಕಿವಿಯಲ್ಲಿದ್ದ ಚಿನ್ನದ ಓಲೆ, ಕರಳಿನಲ್ಲಿದ್ದ ಸರ ಹಾಗೂ ಸೊಂಟದಲ್ಲಿದ್ದ ಸುಮಾರು ₹50,000 ನಗದು ಹಣ ನಾಪತ್ತೆಯಾಗಿದೆ. ಮನೆ ದುರಸ್ತಿಗಾಗಿ ಅವರು ಹಣವನ್ನು ಸದಾ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು ಎನ್ನಲಾಗಿದೆ. ಆಭರಣಗಳನ್ನು ಬಲವಂತವಾಗಿ ಕಿತ್ತುಕೊಂಡಿರುವ ಗುರುತುಗಳು ಕಂಡುಬಂದಿದ್ದು, ಯಾರೋ ಕಿಡಿಗೇಡಿಗಳು ಹಣ ಮತ್ತು ಒಡವೆಗಾಗಿ ವೃದ್ಧೆಯನ್ನು ಕೊಲೆ ಮಾಡಿರಬಹುದು ಎಂದು ಅವರ ಮಕ್ಕಳು ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಮಾಂಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೃದ್ಧೆ ನೈಸರ್ಗಿಕವಾಗಿ ಮೃತಪಟ್ಟ ನಂತರ ಯಾರಾದರೂ ಈ ಕೃತ್ಯ ಎಸಗಿದ್ದಾರೆಯೇ ಅಥವಾ ಹಣಕ್ಕಾಗಿ ಕೊಲೆ ಮಾಡಲಾಗಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬರಬೇಕಿದೆ.

ಪ್ರಸ್ತುತ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (UDR) ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವರದಿ :- ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!