Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ಮಂಡ್ಯ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆ; ಅಪಘಾತವೆಂದು ಬಿಂಬಿಸಲು ಹೋಗಿ ಪೊಲೀಸರ ಬಲೆಗೆ ಬಿದ್ದ ಕಿರಾತಕ ಪತ್ನಿ!

Share News

ಮಂಡ್ಯ: ಜಿಲ್ಲೆಯ ಮರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಅವರ ಅನುಮಾನಾಸ್ಪದ ಸಾವು ಇದೀಗ ಭೀಕರ ಕೊಲೆಯಾಗಿ ಮಾರ್ಪಟ್ಟಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನ ಜೊತೆ ಸೇರಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.

ಮೃತ ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ ಹಾಗೂ ಅದೇ ಗ್ರಾಮದ ಹರೀಶ್ ನಡುವೆ ಕಳೆದ ಕೆಲವು ವರ್ಷಗಳಿಂದ ಅನೈತಿಕ ಸಂಬಂಧವಿತ್ತು. ಒಂದೂವರೆ ವರ್ಷದ ಹಿಂದೆಯೇ ಇವರಿಬ್ಬರೂ ಸಿದ್ದಲಿಂಗಪ್ಪನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಸಿದ್ದಲಿಂಗಪ್ಪ ಅವರು ಪತ್ನಿಯನ್ನು ಸರಿದಾರಿಗೆ ತರಲು ಹಲವು ಬಾರಿ ಬುದ್ಧಿವಾದ ಹೇಳಿದ್ದರೂ, ಕಾಮದ ಅಮಲಿನಲ್ಲಿದ್ದ ಶಾಲಿನಿ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸಲು ಸ್ಕೆಚ್ ಹಾಕಿದ್ದಳು.

ಮಾರ್ಚ್ 6ರಂದು ಸಿದ್ದಲಿಂಗಪ್ಪ ಅವರು ಪೂಜೆ ಮುಗಿಸಿ ಮರಳಗಾಲದ ನಾಲೆ ಏರಿಯ ಮೇಲೆ ಬೈಕ್‌ನಲ್ಲಿ ಬರುತ್ತಿದ್ದರು. ಪತಿಯ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಶಾಲಿನಿ, ಕೂಡಲೇ ಪ್ರಿಯಕರ ಹರೀಶ್‌ಗೆ ಮೆಸೇಜ್ ಮಾಡಿ ಮಾಹಿತಿ ನೀಡಿದ್ದಳು. ದಾರಿಯಲ್ಲಿ ಹೊಂಚು ಹಾಕಿದ್ದ ಹರೀಶ್ ಮತ್ತು ಆತನ ಇಬ್ಬರು ಗೆಳೆಯರು, ಸಿದ್ದಲಿಂಗಪ್ಪ ಅವರನ್ನು ಅಡ್ಡಗಟ್ಟಿ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಕೊಲೆ ಮಾಡಿದ ನಂತರ ಇದನ್ನು ಅಪಘಾತವೆಂದು ಬಿಂಬಿಸಲು ಹಂತಕರು ಸಂಚು ರೂಪಿಸಿದ್ದರು. ಸಿದ್ದಲಿಂಗಪ್ಪ ಅವರ ಮೃತದೇಹ ಹಾಗೂ ಬೈಕನ್ನು ನಾಲೆಯಲ್ಲಿ ಎಸೆದು ಪರಾರಿಯಾಗಿದ್ದರು. ಸಿದ್ದಲಿಂಗಪ್ಪ ನಾಪತ್ತೆಯಾದ ಬಗ್ಗೆ ದೂರು ದಾಖಲಾದಾಗ ತನಿಖೆ ನಡೆಸಿದ ಪೊಲೀಸರಿಗೆ ನಾಲೆ ದಡದಲ್ಲಿ ರಕ್ತದ ಕಲೆಗಳು ಮತ್ತು ಚಪ್ಪಲಿ ಪತ್ತೆಯಾಗಿತ್ತು. ಇದೇ ಸುಳಿವು ಹಿಡಿದು ತನಿಖೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಗಿದೆ.

ಅನುಮಾನದ ಮೇಲೆ ಪತ್ನಿ ಶಾಲಿನಿ ಮತ್ತು ಆಕೆಯ ಪ್ರಿಯಕರ ಹರೀಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಮಾಜದಲ್ಲಿ ಇಂತಹ ಅನೈತಿಕ ಸಂಬಂಧಗಳು ಸಂಸಾರಗಳನ್ನು ಬೀದಿಗೆ ತರುತ್ತಿರುವುದು ಮಾತ್ರವಲ್ಲದೆ, ಅಮಾಯಕರ ಪ್ರಾಣವನ್ನೂ ಬಲಿ ಪಡೆಯುತ್ತಿರುವುದು ದುರದೃಷ್ಟಕರ.

ವರದಿ :- ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!