ಯುವತಿ ವಿಚಾರವಾಗಿ ಕಿರಿಕ್: ಯುವಕನ ಬರ್ಬರ ಹತ್ಯೆ

ತೇರದಾಳ: ಯುವತಿಯೊಬ್ಬಳ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ನಡುವೆ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿ, ಯುವಕನೋರ್ವನ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ನಿವಾಸಿ ರಾಹುಲ್ ಕಾಗಿ (ಮೃತ) ಹಾಗೂ ಶ್ರೇಯಸ್ ಗರಗಟ್ಟಿ (ಆರೋಪಿ) ನಡುವೆ ಯುವತಿಯ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ. ಮಂಗಳವಾರ ಇದೇ ವಿಷಯವಾಗಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ ಸಂದರ್ಭದಲ್ಲಿ ಆಕ್ರೋಶಗೊಂಡ ಶ್ರೇಯಸ್, ರಾಹುಲ್ ಮೇಲೆ ಮಾರಣಾಂತಿಕ ಆಯುಧಗಳಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ರಾಹುಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಕೃತ್ಯ ಎಸಗಿದ ಬಳಿಕ ಆರೋಪಿ ಶ್ರೇಯಸ್ ಗರಗಟ್ಟಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ತೇರದಾಳ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಯುವತಿಯ ವಿಚಾರಕ್ಕೆ ಸಂಬಂಧಿಸಿದ ವೈಯಕ್ತಿಕ ದ್ವೇಷವೇ ಈ ಕೊಲೆಗೆ ಪ್ರಾಥಮಿಕ ಕಾರಣವೆಂದು ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವರದಿ :- ಆಂಟೋನಿ ಪತ್ರಕರ್ತ



