Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ಪ್ರೀತಿ ಹೆಸರಲ್ಲಿ ಮತಾಂತರ, ನಂತರ ವಂಚನೆ: ಬೀದಿಗೆ ಬಿದ್ದ ಮಹಿಳೆಯ ಕಣ್ಣೀರಿನ ಕಥೆ!

Share News

ಬಾಗಲಕೋಟೆ: ಪ್ರೀತಿಯ ಬಲೆಯಲ್ಲಿ ಬಿದ್ದು, ಧರ್ಮ ಬದಲಿಸಿ ಮದುವೆಯಾದ ಮಹಿಳೆಯೊಬ್ಬರು ಈಗ ಪತಿಯಿಂದಲೇ ವಂಚನೆಗೊಳಗಾಗಿ ಬೀದಿಗೆ ಬಿದ್ದಿರುವ ಧಾರುಣ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹಣ, ಒಡವೆ ದೋಚಿ ಪತಿರಾಯ ಕೈಕೊಟ್ಟಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ.

ಮುಧೋಳ ನಿವಾಸಿಯಾದ ಶ್ರೀದೇವಿ (ಈಗಿನ ಹೆಸರು ಹಬೀಬಾ) ಅವರಿಗೆ 14 ವರ್ಷಗಳ ಹಿಂದೆಯೇ ವಿವಾಹವಾಗಿ ಮಕ್ಕಳಿದ್ದರು. ಆದರೆ, ಕೆಲಸದ ನಿಮಿತ್ತ ಪರಿಚಯವಾದ ಸವಿಫ್ ಪತ್ತೆ ಎಂಬಾತ, ತನಗೆ ಈಗಾಗಲೇ ಇಬ್ಬರು ಪತ್ನಿಯರಿದ್ದರೂ ಆ ವಿಷಯ ಮುಚ್ಚಿಟ್ಟು ಶ್ರೀದೇವಿಯವರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದಾನೆ. ಆರೋಪಿಯ ಒತ್ತಾಯಕ್ಕೆ ಮಣಿದು ಶ್ರೀದೇವಿ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು 2023ರಲ್ಲಿ ಆತನನ್ನು ಮದುವೆಯಾಗಿದ್ದರು.

ಮದುವೆಯಾದ ಕೆಲವೇ ದಿನಗಳಲ್ಲಿ ಸವಿಫ್ ತನ್ನ ಅಸಲಿ ಬುದ್ಧಿ ತೋರಿಸಿದ್ದಾನೆ. ಶ್ರೀದೇವಿಯವರ ಬಳಿಯಿದ್ದ 4 ಲಕ್ಷ ರೂಪಾಯಿ ನಗದು ಮತ್ತು 4 ತೊಲ ಚಿನ್ನದ ಆಭರಣಗಳನ್ನು ಕಿತ್ತುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಈಗ ತನ್ನ ಮೊದಲ ಪತ್ನಿಯ ಜೊತೆ ಸೇರಿಕೊಂಡು ಶ್ರೀದೇವಿಯವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.

ನನಗೆ ಈಗ ಮೊದಲ ಗಂಡನೂ ಇಲ್ಲ, ಎರಡನೇ ಪತಿಯೂ ಮೋಸ ಮಾಡಿದ್ದಾನೆ. ಮಕ್ಕಳನ್ನು ಕಟ್ಟಿಕೊಂಡು ನಾನು ಎಲ್ಲಿಗೆ ಹೋಗಲಿ? ಹಣ-ಬಂಗಾರವನ್ನೆಲ್ಲಾ ಕಸಿದುಕೊಂಡು ನನ್ನನ್ನು ಬೀದಿಗೆ ತಳ್ಳಿದ್ದಾರೆ,” ಎಂದು ಶ್ರೀದೇವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಸ್ಥಳೀಯ ಮುಧೋಳ ಠಾಣೆಯಲ್ಲಿ ದೂರು ನೀಡಿದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮಹಿಳೆ ಎಸ್ಪಿ ಕಚೇರಿಗೆ ಧಾವಿಸಿದ್ದರು. ಮಹಿಳೆಯ ಅಹವಾಲು ಆಲಿಸಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್, ಕೂಡಲೇ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಹಿಳಾ ಪೊಲೀಸ್ ಠಾಣೆಯ ಮೂಲಕವೂ ಈ ಪ್ರಕರಣದ ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

ವರದಿ :- ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!