Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ಬೇಲಿಯೇ ಎದ್ದು ಹೊಲ ಮೇಯ್ದಂತೆ: ಒಳ ಉಡುಪಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಜೈಲು ವಾರ್ಡನ್ ಬಂಧನ!

Share News

ಬೆಂಗಳೂರು: ಸಿಬ್ಬಂದಿಗಳ ಹದ್ದಿನ ಕಣ್ಣು, ಸಿಸಿಟಿವಿಗಳ ಕಾವಲು ಇರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ಒಬ್ಬನೇ ಗಾಂಜಾ ಸಾಗಾಟ ಮಾಡುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿ ಕೈದಿಗಳಿಗೆ ಅಮಲು ಪದಾರ್ಥ ಪೂರೈಸಲು ಯತ್ನಿಸಿದ ವಾರ್ಡನ್ ಪ್ರಕಾಶ್ ಗಾವಡೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಾರ್ಚ್ 9ರಂದು ರಾತ್ರಿ ಕರ್ತವ್ಯಕ್ಕೆ ಹಾಜರಾಗಲು ಬಂದ ವಾರ್ಡನ್ ಪ್ರಕಾಶ್ ಗಾವಡೆ, ತಪಾಸಣಾ ವಿಭಾಗ-2ರಲ್ಲಿ ಕೆಎಸ್‌ಐಎಸ್‌ಎಫ್ (KSISF) ಸಿಬ್ಬಂದಿಯ ತಪಾಸಣೆಗೆ ಒಳಗಾಗಿದ್ದ. ಈ ವೇಳೆ ಆತನ ನಡವಳಿಕೆಯಲ್ಲಿ ಕಂಡುಬಂದ ವ್ಯತ್ಯಾಸದಿಂದ ಅನುಮಾನಗೊಂಡ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿದಾಗ, ಆತ ತನ್ನ ಒಳ ಉಡುಪಿನಲ್ಲಿ (Undergarments) ಕಪ್ಪು ಟೇಪ್‌ನಿಂದ ಸುತ್ತಿದ ಪೊಟ್ಟಣ ಮತ್ತು ನಗದು ಹಣವನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಪೊಟ್ಟಣ ಬಿಚ್ಚಿ ನೋಡಿದಾಗ ಅದರೊಳಗೆ ಗಾಂಜಾ ಇರುವುದು ದೃಢಪಟ್ಟಿದೆ.

ಪೊಲೀಸರ ವಿಚಾರಣೆ ವೇಳೆ ಈ ಅಕ್ರಮದ ಹಿಂದಿನ ಅಸಲಿ ಕಾರಣ ಬಯಲಾಗಿದೆ. ಜೈಲಿನಲ್ಲಿರುವ ಕೊಲೆ ಪ್ರಕರಣದ ಆರೋಪಿಯೊಬ್ಬ ಈ ವಾರ್ಡನ್‌ಗೆ ಗಾಳ ಹಾಕಿದ್ದ ಎನ್ನಲಾಗಿದೆ. ಹೊರಗಿನಿಂದ ಗಾಂಜಾ ತಂದು ಜೈಲಿನೊಳಗೆ ತಲುಪಿಸಿದರೆ 10 ಸಾವಿರ ರೂಪಾಯಿ ನೀಡುವುದಾಗಿ ಕೈದಿ ಆಮಿಷ ಒಡ್ಡಿದ್ದ. ಈ ಹಣದ ಆಸೆಗಾಗಿ ಅಧಿಕಾರಿಯೇ ‘ಕಳ್ಳಾಟ’ಕ್ಕಿಳಿದಿರುವುದು ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿದೆ.

ಕಳೆದ ಡಿಸೆಂಬರ್‌ನಲ್ಲಿ ಜೈಲಿಗೆ ಭೇಟಿ ನೀಡಿದ್ದ ಡಿಜಿಪಿಯವರು, ಅಡುಗೆ ಮನೆಯಿಂದ ಆಸ್ಪತ್ರೆಯವರೆಗೆ ಎಲ್ಲೆಡೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. “ಮೊಬೈಲ್ ಅಥವಾ ಗಾಂಜಾ ಸಾಗಣೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ಸಿಬ್ಬಂದಿಗೆ ಎಚ್ಚರಿಸಿದ್ದರು. ಆದರೆ, ಉನ್ನತ ಅಧಿಕಾರಿಗಳ ಈ ಎಚ್ಚರಿಕೆಯನ್ನೂ ಲೆಕ್ಕಿಸದೆ ಇಂತಹ ಅಕ್ರಮಗಳು ನಡೆಯುತ್ತಿರುವುದು ಜೈಲು ಆಡಳಿತದ ಮೇಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರೇರಣೆ ನೀಡಿದ ಕೈದಿಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಜೈಲಿನಲ್ಲಿ ಅಶಿಸ್ತು ತೋರುವ ಮತ್ತು ಅಕ್ರಮ ಎಸಗುವ ಯಾವುದೇ ಅಧಿಕಾರಿಯನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ.”

ಕೈದಿಗಳನ್ನು ತಿದ್ದಿ ಸನ್ಮಾರ್ಗಕ್ಕೆ ತರಬೇಕಾದ ಅಧಿಕಾರಿಗಳೇ ಹಣದ ಆಸೆಗೆ ಬಿದ್ದು ಈ ರೀತಿ ದೇಶದ್ರೋಹದ ಕೆಲಸಕ್ಕೆ ಕೈಹಾಕುತ್ತಿರುವುದು ವಿಷಾದನೀಯ. ಇಂತಹ ಅಧಿಕಾರಿಗಳ ವಿರುದ್ಧ ಕೇವಲ ಅಮಾನತು ಮಾತ್ರವಲ್ಲದೆ, ಸೇವೆಯಿಂದಲೇ ವಜಾಗೊಳಿಸುವಂತಹ ಕಠಿಣ ಶಿಕ್ಷೆಯಾಗಬೇಕಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!