Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಸಂಸಾರದಲ್ಲಿ ಬಿರುಗಾಳಿ: ಪತಿಯ ನಿಂದನೆಗೆ ಮನನೊಂದು ಗೃಹಿಣಿ ಆತ್ಮಹತ್ಯೆ

Share News

ಸಣ್ಣಪುಟ್ಟ ವಿಚಾರಗಳಿಗೆ ದಂಪತಿಗಳ ನಡುವೆ ಉಂಟಾಗುವ ವಾಗ್ವಾದವೊಂದು ಗೃಹಿಣಿಯೊಬ್ಬರ ಬಲಿ ಪಡೆದ ಘಟನೆ ಸಿಲಿಕಾನ್ ಸಿಟಿಯಲ್ಲಿ ವರದಿಯಾಗಿದೆ. ಮೂರು ದಿನದ ಹಳೆಯ ಸಾಂಬಾರ್ ಬಡಿಸಿದ ವಿಚಾರಕ್ಕೆ ಪತಿ ನಡೆಸಿದ ಅವಾಚ್ಯ ನಿಂದನೆಯಿಂದ ನೊಂದ 27 ವರ್ಷದ ಕಾವ್ಯ ಎಂಬುವವರು ವಿಧಿವಶರಾಗಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ರಂಗಸ್ವಾಮಿ ಎಂಬುವವರನ್ನು ವಿವಾಹವಾಗಿದ್ದ ಕಾವ್ಯ, ಸುಖಿ ಸಂಸಾರ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಮನೆಯಲ್ಲಿ ಉಳಿದಿದ್ದ ಸಾಂಬಾರನ್ನು ಫ್ರಿಡ್ಜ್‌ನಲ್ಲಿಟ್ಟು, ಅದನ್ನು ಸತತ ಮೂರು ದಿನಗಳ ಕಾಲ ಪತಿಗೆ ಬಡಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಅಸಮಾಧಾನಗೊಂಡಿದ್ದ ಪತಿ ರಂಗಸ್ವಾಮಿ, ಮೂರನೇ ದಿನ ತಾಳ್ಮೆ ಕಳೆದುಕೊಂಡು ಪತ್ನಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾನೆ.

ವರದಿಗಳ ಪ್ರಕಾರ, ಪತಿಯು ಕಾವ್ಯ ಅವರಿಗೆ ಹಿಗ್ಗಾಮುಗ್ಗಾ ಬೈದಿದ್ದಲ್ಲದೆ, ಹಲ್ಲೆಗೂ ಮುಂದಾಗಿದ್ದ ಎನ್ನಲಾಗಿದೆ. ಇದರಿಂದ ತೀವ್ರವಾಗಿ ಅವಮಾನಕ್ಕೊಳಗಾದ ಮತ್ತು ಮನನೊಂದ ಕಾವ್ಯ, ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ದಂಪತಿಗಳ ಈ ಕಲಹದ ನಡುವೆ ಈಗ 4 ವರ್ಷದ ಪುಟ್ಟ ಕಂದಮ್ಮ ತಾಯಿಯ ಮಮತೆಯಿಂದ ವಂಚಿತವಾಗಿದೆ. ಕ್ಷಣಿಕ ಕೋಪ ಮತ್ತು ತಾಳ್ಮೆಯ ಕೊರತೆಯಿಂದಾಗಿ ಒಂದು ಸುಂದರ ಕುಟುಂಬ ಇಂದು ಬೀದಿಗೆ ಬಿದ್ದಂತಾಗಿದೆ. ಸದ್ಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿ ರಂಗಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

*ವರದಿ :- ಆಂಟೋನಿ ಪತ್ರಕರ್ತ*


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!