*ಸವಾರಿ ಕೊಟ್ಟವನೇ ಸಂಚು ರೂಪಿಸಿದ; ಹೆಬ್ಬಾಳ ಪೊಲೀಸರ ಬಲೆಯಲ್ಲಿ ಕಿಲಾಡಿ ರ‍್ಯಾಪಿಡೋ ಚಾಲಕ!*

ಬೆಂಗಳೂರು: ಟ್ಯಾಕ್ಸಿ ಬುಕ್ ಮಾಡಿ ಹೋಗುವಾಗ ಫೋನ್‌ನಲ್ಲಿ ಆಡುವ ಮಾತು ನಿಮ್ಮ ಮನೆಯನ್ನೇ ದೋಚುವಂತೆ ಮಾಡಬಹುದು ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ. ಮುಂಬೈ ಪ್ರವಾಸಕ್ಕೆಂದು ಮನೆ ಬೀಗ ಹಾಕಿ ತೆರಳಿದ್ದ ಕುಟುಂಬವೊಂದರ ಮನೆಯಲ್ಲಿ ಕಳವು ಮಾಡಿದ್ದ ರ‍್ಯಾಪಿಡೋ ಚಾಲಕನನ್ನು ಹೆಬ್ಬಾಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಳೆದ ಫೆಬ್ರವರಿ 11 ರಂದು ದೂರುದಾರರಾದ ಸೈಯದ್ ಅಕ್ರಂ ಅವರು ಕುಟುಂಬದೊಂದಿಗೆ ಮುಂಬೈಗೆ ಶಾಪಿಂಗ್‌ಗಾಗಿ ತೆರಳಲು ರ‍್ಯಾಪಿಡೋ ಕಾರ್ ಬುಕ್ ಮಾಡಿದ್ದರು. ಆರೋಪಿ ಅಬ್ದುಲ್ ರೆಹಮಾನ್ ಚಾಲನೆ ಮಾಡುತ್ತಿದ್ದ ಕಾರಿನಲ್ಲಿ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಹೋಗುವಾಗ, ಸೈಯದ್ ಅವರು ತಾವು 4-5 ದಿನಗಳ ಕಾಲ ಊರಲ್ಲಿ ಇರುವುದಿಲ್ಲ ಎಂಬ ವಿಷಯವನ್ನು ಫೋನ್‌ನಲ್ಲಿ ಮಾತನಾಡಿದ್ದರು. ಇದನ್ನು ಗಮನಿಸಿದ ಚಾಲಕ ಅಬ್ದುಲ್, ದರೋಡೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದ.
ಕಳ್ಳತನ ಪತ್ತೆ: ಫೆಬ್ರವರಿ 16 ರಂದು ಸೈಯದ್ ಕುಟುಂಬ ಮನೆಗೆ ಮರಳಿದಾಗ ಬೀಗ ಮುರಿದು ಒಳಗೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಅಂದಾಜು 26.88 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮಾಯವಾಗಿತ್ತು.
ತನಿಖೆಯ ಹಾದಿ: ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ, ಸಂಶಯದ ಮುಳ್ಳು ಅಂದು ಸವಾರಿ ಕರೆದೊಯ್ದ ಚಾಲಕನತ್ತ ತಿರುಗಿತು.
ತಾಂತ್ರಿಕ ಸಾಕ್ಷ್ಯ: ಮೊಬೈಲ್ ಲೊಕೇಶನ್ ಮತ್ತು ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ನೇತೃತ್ವದ ತಂಡ ಆರೋಪಿಯನ್ನು ಹೆಡೆಮುರಿ ಕಟ್ಟಿದೆ.
ಬಂಧಿತ ಅಬ್ದುಲ್ ರೆಹಮಾನ್‌ನಿಂದ ಪೊಲೀಸರು ಈ ಕೆಳಗಿನವುಗಳನ್ನು ವಶಪಡಿಸಿಕೊಂಡಿದ್ದಾರೆ: ₹26,88,000 ಮೌಲ್ಯದ ಚಿನ್ನದ ಆಭರಣಗಳು. ₹25,000 ನಗದು ಹಣ.
ಹಳೇ ಚಾಳಿ ಬಿಡದ ಆರೋಪಿ: ಅಂದಹಾಗೆ ಈ ಅಬ್ದುಲ್ ರೆಹಮಾನ್ ಸಾಮಾನ್ಯನಲ್ಲ. ಈತನ ಮೇಲೆ ಈ ಹಿಂದೆ ಕೆ.ಜೆ. ಹಳ್ಳಿ ಮತ್ತು ರಾಮಮೂರ್ತಿನಗರ ಪೊಲೀಸ್ ಠಾಣೆಗಳಲ್ಲಿಯೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
*ವರದಿ :- ಆಂಟೋನಿ ಪತ್ರಕರ್ತ*



