Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ಸಂಬಂಧಿಕರ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವು: ಮಹಿಳಾ ಕಳ್ಳಿ ಪೊಲೀಸ್ ಬಲೆಗೆ

Share News

ಶಿವಮೊಗ್ಗ: ನಗರದ ಶಾದಿ ಮಹಲ್‌ಗಳಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಗಳನ್ನೇ ಗುರಿಯಾಗಿಸಿಕೊಂಡು, ಅತಿಥಿಗಳ ಸೋಗಿನಲ್ಲಿ ಬಂದು ಚಿನ್ನಾಭರಣ ಕದಿಯುತ್ತಿದ್ದ ಮಹಿಳೆಯನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯಿಂದ ₹18 ಲಕ್ಷ ಮೌಲ್ಯದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಹೊರವಲಯದ ಸೂಳೆಬೈಲ್ ನಿವಾಸಿ ರುಕ್ಸಾರ್ ಫಿರ್ದೋಸ್ (30) ಬಂಧಿತ ಆರೋಪಿ. ಈಕೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾದಿ ಮಹಲ್‌ಗಳಲ್ಲಿ ಮದುವೆ ನಡೆಯುವಾಗ ಅತ್ಯಂತ ನಾಜೂಕಾಗಿ ಪ್ರವೇಶಿಸುತ್ತಿದ್ದಳು. ಎಲ್ಲರೂ ಸಂಭ್ರಮದಲ್ಲಿ ಮೈಮರೆತಿದ್ದಾಗ, ತಾನು ಕೂಡ ಮದುವೆಗೆ ಬಂದ ಅತಿಥಿ ಅಥವಾ ಹತ್ತಿರದ ಸಂಬಂಧಿ ಎಂಬಂತೆ ನಟಿಸಿ, ಜನರ ಕಣ್ಣು ತಪ್ಪಿಸಿ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಳು.

ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್ ಹಾಗೂ ಪಿಎಸ್‌ಐ ಗಾದಿಲಿಂಗಪ್ಪ ಗೌಡರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಶಾದಿ ಮಹಲ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು, ಆರೋಪಿ ರುಕ್ಸಾರ್ ಫಿರ್ದೋಸ್ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಆರೋಪಿಯು ತನ್ನ ಕೃತ್ಯಗಳನ್ನು ಒಪ್ಪಿಕೊಂಡಿದ್ದು, ಆಕೆಯಿಂದ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವ ಸುಮಾರು 120 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು ₹18 ಲಕ್ಷ ಎಂದು ಅಂದಾಜಿಸಲಾಗಿದೆ. ಬಂಧಿತ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವರದಿ :- ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!