ಸಿನಿಮಾ ಸ್ಟೈಲ್ ದರೋಡೆಗೆ ಬ್ರೇಕ್: 6.5 ಲಕ್ಷ ಹಣದೊಂದಿಗೆ ಎಸ್ಕೇಪ್ ಆಗುತ್ತಿದ್ದ ಕಳ್ಳರಿಗೆ ಸ್ಥಳೀಯರಿಂದ ‘ಧರ್ಮದೇಟು’!

ಚಿಕ್ಕಬಳ್ಳಾಪುರ: ಮದುವೆ ಕಾರ್ಯಕ್ಕಾಗಿ ಬೆವರು ಸುರಿಸಿ ಕೂಡಿಸಿಟ್ಟಿದ್ದ ಹಣವನ್ನು ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಹೊತ್ತೊಯ್ಯಲು ಯತ್ನಿಸಿದ ಖದೀಮರಿಗೆ ಸಾರ್ವಜನಿಕರೇ ತಕ್ಕ ಪಾಠ ಕಲಿಸಿದ ಘಟನೆ ನಗರದ ಹೊರವಲಯದ ಕೆ.ವಿ ಕ್ಯಾಂಪಸ್ ಬಳಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಉಷಾ ಎಂಬುವವರು ತಮ್ಮ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನಡೆಯಲಿದ್ದ ಸಂಬಂಧಿಕರ ಮದುವೆಗಾಗಿ ಚಿನ್ನಾಭರಣ ಅಡವಿಟ್ಟು 6.5 ಲಕ್ಷ ರೂಪಾಯಿ ಹಣದೊಂದಿಗೆ ಕಾರಿನಲ್ಲಿ ಹೊರಟಿದ್ದರು. ದಾರಿಯಲ್ಲಿ ಹಸಿವಾದ ಕಾರಣ ತಿಂಡಿ ತಿನ್ನಲು ಕಾರು ನಿಲ್ಲಿಸಿದ ಕ್ಷಣವೇ ಹೊಂಚು ಹಾಕಿದ್ದ ಮೂವರು ಕಿರಾತಕರು ಕಾರಿನ ಬಾಗಿಲು ತೆರೆದು ಹಣದ ಬ್ಯಾಗ್ ಎಗರಿಸಿ ಪರಾರಿಯಾಗಲು ಯತ್ನಿಸಿದ್ದಾರೆ.
ಹಣ ಕಳೆದುಕೊಂಡ ಮಹಿಳೆಯ ಮಕ್ಕಳು ಜೋರಾಗಿ ಕಿರುಚಿಕೊಂಡಾಗ, ಸಮೀಪದಲ್ಲೇ ಕ್ರಿಕೆಟ್ ಆಡುತ್ತಿದ್ದ ಸ್ಥಳೀಯ ಯುವಕರು ಬ್ಯಾಟ್ ಬಿಟ್ಟು ಕಳ್ಳರ ಹಿಂದೆ ಬಿದ್ದರು. ಸಿನಿಮಾ ಮಾದರಿಯಲ್ಲಿ ಕಿಲೋಮೀಟರ್ಗಟ್ಟಲೆ ಬೆನ್ನಟ್ಟಿ ಇಬ್ಬರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಸಾರ್ವಜನಿಕ ಆಕ್ರೋಶ: ಸಿಕ್ಕಿಬಿದ್ದ ಕಳ್ಳರನ್ನು ಕಂಬಕ್ಕೆ ಕಟ್ಟಿ ಹಾಕಿ ಸ್ಥಳೀಯರು ಮನಬಂದಂತೆ ಥಳಿಸಿದ್ದಾರೆ.
ಪರಾರಿ: ದುರದೃಷ್ಟವಶಾತ್, ಮೂರನೇ ಆರೋಪಿ ಹಣದ ಬ್ಯಾಗ್ನೊಂದಿಗೆ ಪರಾರಿಯಾಗಿದ್ದಾನೆ.
ಈ ದರೋಡೆ ಯತ್ನದ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವಿದೆ ಎಂಬ ಗುಟ್ಟು ಕಳ್ಳರಿಗೆ ತಿಳಿದಿದ್ದು ಹೇಗೆ ಎಂಬುದು ಈಗ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಬಂಧಿತ ಆರೋಪಿಗಳು ವಿಚಾರಣೆ ವೇಳೆ ಕಾರಿನಲ್ಲಿದ್ದವರ ಮೇಲೆಯೇ ಉಲ್ಟಾ ಶಂಕೆ ವ್ಯಕ್ತಪಡಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿ ಹಾಗೂ ಹಣದ ಪತ್ತೆಗಾಗಿ ಬಲೆ ಬೀಸಿದ್ದಾರೆ.
ವರದಿ :- ಆಂಟೋನಿ ಪತ್ರಕರ್ತ



