Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ಬೆಂಗಳೂರು: 68 ಬಾರಿ ಮಚ್ಚಿನೇಟು, ರಕ್ತದ ಮಡುವಿನಲ್ಲಿ ಯುವಕನ ಬಿಟ್ಟು ಹಂತಕರ ಕುಣಿತ; ಸೇಡಿನ ಕಿಚ್ಚಿಗೆ ಮಾಗಡಿ ರಸ್ತೆ ನಡುಗಿತು!

Share News

ಬೆಂಗಳೂರು: ರಾಜಧಾನಿಯ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಭೀಕರ ಹಲ್ಲೆಯೊಂದು ನಡೆದಿದ್ದು, ಶರತ್ ಎಂಬಾತನ ಗ್ಯಾಂಗ್ ಸಂತೋಷ್ ಎಂಬ ಯುವಕನ ಮೇಲೆ ಬರೋಬ್ಬರಿ 68 ಬಾರಿ ಮಚ್ಚಿನಿಂದ ದಾಳಿ ನಡೆಸಿ ವಿಕೃತಿ ಮೆರೆದಿದೆ. ಅಚ್ಚರಿಯೆಂದರೆ, ದಾಳಿ ನಡೆಸಿದ ನಂತರ ಹಂತಕರು ಸ್ಥಳದಲ್ಲೇ ಡ್ಯಾನ್ಸ್ ಮಾಡಿ ಪರಾರಿಯಾಗಿದ್ದು, ಈ ದೃಶ್ಯಗಳು ಜನತೆಯನ್ನು ಬೆಚ್ಚಿಬೀಳಿಸಿವೆ.

ಈ ಘಟನೆಯ ಹಿಂದೆ ಎರಡು ವರ್ಷಗಳ ಸುದೀರ್ಘ ಹಗೆತನ ಅಡಗಿದೆ.

2024ರ ಘಟನೆ: ಈ ಹಿಂದೆ ಮೋಹನ್ ಮತ್ತು ಸಂತೋಷ್ ಸ್ನೇಹಿತರಾಗಿದ್ದರು. ಮಂಡ್ಯ ಮೂಲದ ಇವರು ಕಾರು ಓಡಿಸುವ ವಿಚಾರಕ್ಕೆ ಬೆಂಗಳೂರಿನಲ್ಲಿ ಗಲಾಟೆ ಮಾಡಿಕೊಂಡಿದ್ದರು. ನಂತರ ಶಿವನಸಮುದ್ರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೋಗಿದ್ದಾಗ ಜಗಳ ವಿಕೋಪಕ್ಕೆ ಹೋಗಿ, ಸಂತೋಷ್ ತನ್ನ ಸ್ನೇಹಿತ ಮೋಹನ್‌ನನ್ನು ಕೊಲೆ ಮಾಡಿದ್ದನು.

ಜೈಲಿನಿಂದ ಬಿಡುಗಡೆ: ಈ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಸಂತೋಷ್, ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದನು. ತನ್ನ ಸಹೋದರ ಮೋಹನ್‌ನನ್ನು ಕೊಂದಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಶರತ್ ಹೊಂಚು ಹಾಕುತ್ತಿದ್ದನು.

ಕಳೆದ ಮಾರ್ಚ್ 9ರಂದು ಸಂತೋಷ್ ಒಂಟಿಯಾಗಿರುವುದನ್ನು ಗಮನಿಸಿದ ಶರತ್ ಮತ್ತು ಆತನ ಗ್ಯಾಂಗ್, ಮಾರಕಾಸ್ತ್ರಗಳೊಂದಿಗೆ ಮುಗಿಬಿದ್ದಿದ್ದಾರೆ. ರಸ್ತೆಯಲ್ಲೇ ಅಟ್ಟಾಡಿಸಿ 68 ಬಾರಿ ಮಚ್ಚಿನಿಂದ ಕೊಚ್ಚಿದ್ದಾರೆ. ಸಂತೋಷ್ ಪ್ರಾಣಾಪಾಯದಿಂದ ಹೋರಾಡುತ್ತಿದ್ದರೂ ದಯೆ ತೋರದ ಹಂತಕರು, ಕೃತ್ಯದ ನಂತರ ವಿಜಯೋತ್ಸವದಂತೆ ಅಲ್ಲಿಯೇ ಕುಣಿದು ಸಂಭ್ರಮಿಸಿರುವುದು ಅಮಾನವೀಯತೆಯ ಪರಮಾವಧಿಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಮಾಗಡಿ ರಸ್ತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ಅವರು, “ಹಳೆ ದ್ವೇಷವೇ ಈ ಕೃತ್ಯಕ್ಕೆ ಕಾರಣವಾಗಿದ್ದು, ಸದ್ಯಕ್ಕೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಹಲ್ಲೆಗೊಳಗಾದ ಸಂತೋಷ್ ಸ್ಥಿತಿ ಚಿಂತಾಜನಕವಾಗಿದೆ,” ಎಂದು ತಿಳಿಸಿದ್ದಾರೆ.

ಬೆಂಗಳೂರಿನ ರೌಡಿ ಚಟುವಟಿಕೆಗಳು ಮತ್ತು ಗ್ಯಾಂಗ್ ವಾರ್‌ಗಳ ಭೀಕರತೆಯನ್ನು ಈ ಘಟನೆ ಮತ್ತೊಮ್ಮೆ ಅನಾವರಣಗೊಳಿಸಿದೆ.

ವರದಿ :-ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!