Crime Newsಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುರಾಜ್ಯ ಸುದ್ದಿ

ಬಳ್ಳಾರಿ: ವಸತಿ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಭೀಕರ ಹಲ್ಲೆ, ಓರ್ವ ಸಾವು

Share News

ಬಳ್ಳಾರಿ: ನಗರದ ಗುರುಕುಲ ವಸತಿ ಶಾಲೆಯಲ್ಲಿ ಶನಿವಾರ ತಡರಾತ್ರಿ ನಡೆದ ಭೀಕರ ಘಟನೆಯೊಂದರಲ್ಲಿ, ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಗಳು ಹಾಗೂ ವಾರ್ಡನ್ ಮೇಲೆ ಕಬ್ಬಿಣದ ರಾಡ್‌ನಿಂದ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದಾನೆ.

ಶನಿವಾರ ರಾತ್ರಿ ಎಲ್ಲರೂ ಊಟ ಮುಗಿಸಿ ಮಲಗಿದ್ದ ಸಮಯದಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಮಂಚದ ಕಬ್ಬಿಣದ ರಾಡ್‌ನಿಂದ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಈ ಅನಿರೀಕ್ಷಿತ ದಾಳಿಯಿಂದಾಗಿ ಎಂಟು ಮಂದಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಗಾಯಗೊಂಡಿರುವ ವಾರ್ಡನ್ ಸೇರಿದಂತೆ ಇತರ ಏಳು ಬಾಲಕರನ್ನು ತಕ್ಷಣವೇ ಬಳ್ಳಾರಿಯ ಬಿಮ್ಸ್ (VIMS) ಮತ್ತು ಟ್ರಾಮಾಕೇರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಬಾಲಕನ ತಂದೆ ಲಕ್ಷ್ಮೀಕಾಂತ್ ಅವರು ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಹಲ್ಲೆ ನಡೆಸಿದ ವಿದ್ಯಾರ್ಥಿ ಮಾನಸಿಕ ಅಸ್ವಸ್ಥನಾಗಿರಬಹುದು ಅಥವಾ ಮಾದಕ ವಸ್ತು ಸೇವಿಸಿರಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದು, ಈ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಕೃತ್ಯ ಎಸಗಿದ ಬಳಿಕ ಆರೋಪಿ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಹಲ್ಲೆಗೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲ. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮರೆಡ್ಡಿ ಅವರು ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗತಿಯ ಬಗ್ಗೆ ಹಾಸ್ಟೆಲ್ ನಿರ್ವಾಹಕರು ಹೆಚ್ಚಿನ ನಿಗಾ ವಹಿಸಬೇಕಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

*ವರದಿ :- ಆಂಟೋನಿ ಪತ್ರಕರ್ತ*


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!