Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಆನೇಕಲ್ ರಿಯಲ್ ಎಸ್ಟೇಟ್ ಏಜೆಂಟ್ ಹತ್ಯೆ ರಹಸ್ಯ ಭೇದಿಸಿದ ಪೊಲೀಸರು: ಎಂಟು ಮಂದಿ ಸುಪಾರಿ ಹಂತಕರ ಬಂಧನ

Share News

ಆನೇಕಲ್: ಇತ್ತೀಚೆಗೆ ನಡೆದಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅಲಿಯಾಸ್ ಗೋಪಿ ಅವರ ಭೀಕರ ಅಪಹರಣ ಮತ್ತು ಕೊಲೆ ಪ್ರಕರಣವನ್ನು ಆನೇಕಲ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಒಬ್ಬ ಅಪ್ರಾಪ್ತ ಸೇರಿದಂತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಹಳೆಯ ವೈಷಮ್ಯವೇ ಈ ಕೊಲೆಗೆ ಪ್ರಮುಖ ಕಾರಣ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

ಬಂಧಿತರನ್ನು ಮೋಹನ್ ಬಾಬು, ತೇಜಸ್, ದರ್ಶನ್, ಲಿಖಿತ್, ನಿಖಿಲ್, ಆನಂದ್ ಮತ್ತು ಪ್ರಶಾಂತ್ ಎಂದು ಗುರುತಿಸಲಾಗಿದೆ. ಇವರೊಂದಿಗೆ ಒಬ್ಬ ಅಪ್ರಾಪ್ತ ಬಾಲಕನನ್ನೂ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ ಹುಂಡೈ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಹೊನ್ನಕಳಸಾಪುರ ನಿವಾಸಿ ಗೋಪಾಲ್ ಅವರು ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ, ಅತ್ತಿಬೆಲೆ-ಆನೇಕಲ್ ಮಾರ್ಗದ ಕರ್ಪೂರು ಬಳಿ ಆರೋಪಿಗಳು ಸಂಚು ರೂಪಿಸಿದ್ದರು.

ಮೊದಲು ಗೂಡ್ಸ್ ವಾಹನದಿಂದ ಗೋಪಾಲ್ ಅವರ ಕಾರಿಗೆ ಡಿಕ್ಕಿ ಹೊಡೆಸಲಾಗಿದೆ.

ಅಪಘಾತವಾಯಿತೆಂದು ಗೋಪಾಲ್ ಕೆಳಗಿಳಿಯುತ್ತಿದ್ದಂತೆಯೇ, ಹೊಂಚು ಹಾಕಿದ್ದ ಆರೋಪಿಗಳು ಗೋಪಾಲ್ ಮತ್ತು ಅವರ ಸ್ನೇಹಿತ ಸತೀಶ್ ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚಿದ್ದಾರೆ.

ಕಣ್ಣು ಕಾಣದಂತೆ ಮಾಡಿ ಗೋಪಾಲ್ ಅವರನ್ನು ಬಲವಂತವಾಗಿ ಅಪಹರಿಸಿ ಪರಾರಿಯಾಗಿದ್ದರು.

ಪೊಲೀಸ್ ತನಿಖೆಯ ಪ್ರಕಾರ, ಈ ಕೊಲೆಯ ಹಿಂದೆ ಪ್ರೇಮ ವೈಫಲ್ಯ ಮತ್ತು ಹಳೆಯ ದ್ವೇಷ ಅಡಗಿದೆ. ಮುಖ್ಯ ಆರೋಪಿ ಮೋಹನ್ ಬಾಬು, ಗೋಪಾಲ್ ಅವರ ಪತ್ನಿ ಸ್ವಾತಿ ಅವರನ್ನು ಮದುವೆಯಾಗಲು ಬಯಸಿದ್ದ ಎನ್ನಲಾಗಿದೆ. ಆದರೆ ಸ್ವಾತಿ ಅವರು ಗೋಪಾಲ್ ಅವರನ್ನು ವಿವಾಹವಾಗಿದ್ದರಿಂದ ಮೋಹನ್ ಬಾಬು ತೀವ್ರ ಆಕ್ರೋಶಗೊಂಡಿದ್ದನು. ಈ ದ್ವೇಷದ ಹಿನ್ನೆಲೆಯಲ್ಲಿ ಗೋಪಾಲ್‌ನನ್ನು ಮುಗಿಸಲು ನಿರ್ಧರಿಸಿದ ಮೋಹನ್ ಬಾಬು, ಬರೋಬ್ಬರಿ 25 ಲಕ್ಷ ರೂಪಾಯಿ ಸುಪಾರಿ ನೀಡಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಅಪಹರಣದ ನಂತರ ತಮಿಳುನಾಡಿನ ಡೆಂಕಣೀಕೋಟೆ ಬಳಿ ಗೋಪಾಲ್ ಅವರ ಮೃತದೇಹ ಪತ್ತೆಯಾಗಿತ್ತು. ಆನೇಕಲ್ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವರದಿ :-ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!